Annadhana Mahimaa Sulaadi

ಅನ್ನದಾನ ಮಹಿಮಾ ಸುಳಾದಿ

ಧ್ರುವತಾಳ

ಉತ್ತಮರಿಗೆ ಒಂದು ತುತ್ತನ್ನ ದಾನದಿಂದ |
ಇತ್ತವನ ಹತ್ತು ಹೆತ್ತು ಬಂದು |
ಸಪುತ ಗೋತ್ರಾಕಿಲ ಹತ್ತಿ ಹೊಂದಿದವರು |
ಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರು |
ಅತ್ಯಂತವಾದ ಪಾಪಮೊತ್ತದಾಸಕ್ತರಾಗಿ |
ಮರ್ತ್ಯಲೋಕದಲಿ ಆಪತ್ತು ಬಡುತಲಿರೆದೆ |
ಹೆತ್ತ ಜನನಿಯಂತೆ ಎತ್ತಿಕೊಂಡೊಯ್ದು, ಪುನರಾ |
ವರ್ತಿ ಇಲ್ಲದ, ಲೋಕದತ್ತ ಸೇರಿಸುವುದು |
ಎತ್ತಲೂ ಸರಿಗಾಣದೆ ಕ್ಷುದಾತುರರಾಗಿ ಬಂದ |
ಸೋತ್ತಮರಿಗಿತ್ತ ಫಲ ಚಿತ್ತದಲ್ಲಿ ಎಣಿಸೆ |
ನಿತ್ಯ ಕರುಣವ ಪಡೆದು ಸತ್ಪಥ ನಡೆಯುವರು || 1 ||

ಮಟ್ಟತಾಳ

ಹರಿಸರ್ವೋತ್ತಮನೆಂಬೋ ಜ್ಞಾನ |
ಮರುತದೇವನ ಮತವೆಂಬೋ ಮತದಿ |
ಹರಿಗುರು ಭಕುತಿ ಎಂಬೋ ಭಕುತಿ ನಿರಂತರದಲ್ಲಿ |
ವಿರಕುತರಾಗಿ ಚರಿಸುವ ಜ್ಞಾನಿಗಳ ಸಂಗದಲ್ಲಿ |
ಹರಿ ಕಥಾ ಶ್ರವಣ ನಿರುಮಲ ಮನದಿ, ಎರೆಗುತಲಿಪ್ಪಾ |
ಚರಣೆಯ ಮಾನವನು ಧರೆಯೊಳಗವನೆ ಪರಮೋತ್ತಮನೋ |
ಅರಿದೀಪರಿಯಲ್ಲಿ ವಿಜಯವಿಟ್ಠಲ ಹರಿಯೆ |
ಶರಣಾಗಲಿಬೇಕು ತಾರತಮ್ಯವ ತಿಳಿದು || 2 ||

ತ್ರಿವಿಡಿತಾಳ

ಬಂದ ಅತಿಥಿಯನು ತನ್ನಯ ಬಾಗಿಲ |
ಮುಂದೆ ಕಾಣುತ್ತಲಿವೆ ಎಂದು ಎದಿರುಗೊಂಡು |
ವಂದಿಸಿ ಕರ ಮುಗಿದು ದ್ವಂದ್ವ ಪಾದಕ್ಕೆರಗಿ |
ತಂದೆ, ಆವಲ್ಲಿಂದ ದಯಮಾಡಿ ಬಂದಿರಿ ಎಂದು |
ಒಂದೊಂದು ಮಾತನು ಆನಂದದಿಂದಲಿ ಪೇಳಿ |
ರೆಂದು ಪೀಠವನಿತ್ತು ಚಂದದಿಂದಲಿ ನಲಿದು |
ಮಂದಿರದೊಳಗೆ ವಸುಂಧರ ವಿಬುಧನ್ನ |
ಮಂದಹಾಸದಲಿ ನಯದಿಂದ ಕುಳ್ಳಿರಿಸಿ, ಜಲ |
ದಿಂದ ಚರಣ ತೊಳಿದಾನಂದ ಭರಿತನಾಗಿ |
ಸಂದೇಹ ಬಿಟ್ಟು ಸೊಬಗಿನಿಂದ ಶಿರದ ಮೇಲೆ |
ಬಿಂದು ಮಾತುರ ಜಲ, ಬಂಧು ಬಳಗ ಕೂಡಿ |
ಕುಂದರೆ ಧರಿಸಿ ತಾ ಮಂದಿರದಲ್ಲಿ ಚೆಲ್ಲಿ |
ಒಂದೊಂದು ಪರಿಯಲ್ಲಿ ಪೊಂದಿ ಸುಖದಲ್ಲಿರು |
ಮಂದರಧರ ನಮ್ಮ ವಿಜಯವಿಟ್ಠಲ ಹರಿಯೆ |
ಎಂದೆಂದಿಗೂ ಬಿಡದೆ ವಂದಿಸು ಮನದಲ್ಲಿ || 3 ||

ಅಟ್ಟತಾಳ

ಜೀವೇಶರೊಂದೊಂದು ಪೇಳುವ ಪಾಪಿಗೆ |
ಶ್ರೀವೈಷ್ಣವೋತ್ತಮನು, ಕರೆದು ತುತ್ತನ್ನವ |
ಪಾವನನಾಗುವೆನೆಂದು ಇತ್ತರೆ, ಅದು |
ಪಾವಕನೊಳು ಹಾಕಿದಂತೆ ಬಯಲಾಗಿ |
ಯಾವತ್ತೂ ಪುಣ್ಯವು ನಾಶವಾಗುವುದು |
ಆವಾವ ಕಾಲಕ್ಕೆ ಯಳ್ಳನಿತು ಕಾಣೆ |
ದೇವೇಶ ವಿಜಯವಿಟ್ಠಲ ಜಗದೊಡೆಯನಾ
ಈವನೇತ್ರನ ಪದ ತಾವರೆ ಭಜಿಪಂಗೆ |
ಕೋವಿದನಾಗಿ ಇತ್ತವಗೆ ಸರಿಗಾಣೇ || 4 ||

ಆದಿತಾಳ

ಅನ್ನ ಇತ್ತರೆ ಅದು ಭವನವಾಗಿ ತೋರುವುದು |
ಅನ್ನವೀಯದಿರೆ ಅದು ಕಾನನಕೆ ಸರಿ ಎನ್ನಿ |
ಅನ್ನದಿಂದಲಿ, ಬಂದ ಘನದುರಿತಹರ ಕಾಣೋ |
ಅನ್ನದಿಂದಲಿ, ಸರ್ವಪುಣ್ಯ ಫಲಿಸುವುದು |
ಅನ್ನ ಇತ್ತವನೆ ಕೀರ್ತಿ ಉನ್ನತವಾಗಿ, ತ್ರಿಭು |
ವನದೊಳಗೆ ತುಂಬಿ ಚೆನ್ನಾಗಿ ಪೊಳೆವನಯ್ಯ |
ಅನ್ನದಾನಕ್ಕಿಂತ ಇನ್ನು ಮಿಗಿಲು ದಾನಗಳಿಲ್ಲ |
ಹೊನ್ನು ಹಣ ಕೊಡಲು ಅಗಣ್ಯ ಅನ್ನದಾನಕ್ಕೆ |
ಅನಂತಕಾಲ ಮುಖವನ್ನೆ ಮಾಡಲು ವಿಪ್ರ |
ಗುಣಿಸುದುದಕ್ಕೆ ಸರಿಯೆನ್ನ ಬಹುದೇ ತಿಳಿದು |
ಅನಂತ ಮೂರುತಿ ವಿಜಯವಿಟ್ಠಲರೇಯ |
ಅನ್ನವನೀವನೆಂದು ಮನ್ನಿಸಿ ಸಲಹುವ || 5 ||

ಜತೆ

ಅತಿಥಿ ಅಭ್ಯಾಗತನ ಸಂತೋಷ ಪಡಿಸಲು |
ಸತತ ಪೊಳೆವ ವಿಜಯವಿಟ್ಠಲ ಮನಸಿನೊಳು || 6 ||