Sri Mohana Dasaru

“ಶ್ರೀಮೋಹನದಾಸರ ಸಂಕ್ಷಿಪ್ತ ಚರಿತ್ರೆ”

ಭಕ್ತಿಯಲಿ ಭಾಗಣ್ಣ;
ಯುಕ್ತಿಯಲಿ ಮೋಹನ್ನ;
ಶಕ್ತಿಯಲಿ ತಿಮ್ಮಣ್ಣ;

ಬಡತನದ ಬೇಗೆಯಲ್ಲಿ ಬೆಂದ ಓರ್ವ ಅನಾಥ ತಾಯಿಯು ತನ್ನ ಮಗುವನ್ನು ಉಡಿಯಲ್ಲಿ ಕಟ್ಟಿಕೊಂಡು ತುಂಗೆಯ ಮಡುವಿಗೆ ಹಾರ ಹೊರಟಿದ್ದಳು. ಸುದೈವದಿಂದ ಅದು ಶ್ರೀ ವಿಜಯರಾಯರ ಕಣ್ಣಿಗೆ ಬಿದ್ದು ಅವರು ಧಾವಿಸಿ ಹೋಗಿ ಅದನ್ನು ತಡೆದರು.

ತುಂಗೆಯಲ್ಲಿ ಎಸೆಯ ಹೊರಟ ಅವಳನ್ನೂ; ಅವಳ ಮಗುವನ್ನೂ ತಡೆದು ಅವಳಿಂದ ಆ ಮಗುವನ್ನು ಪಡೆದರು. ಆ ಅನಾಥಳಿಗೆ ಆಶ್ರಯವಿತ್ತು ಕಾಪಾಡಿದರು. ಆ ಮಗುವನ್ನು ತೊಡೆಯ ಮೇಲೆ ಆಡಿಸಿ ಬೆಳಿಸಿ ದೊಡ್ಡವನನ್ನಾಗಿ ಮಾಡಿದರು.

ಚಿರಂಜೀವಿಯಾಗೆಲೆವೊ ಚಿನ್ನ ನೀನು ।
ಪರಮ ಭಾಗವತರ ಪಾದ ಧೂಳಿ ಧರಿಸುತಲೀ ।।

ಎಂದು ಶ್ರೀ ವಿಜಯದಾಸರು ಹರಿಸಿದ್ದಾರೆ ನಮ್ಮ ಮೋಹನದಾಸರಿಗೆ. ಬಂಧು ಬಳಗದವರಿಂದ, ಸಮಾಜದ ಜನರಿಂದ ತಿರಸ್ಕಾರ ಹೊಂದಿದ ಕೂಸು, ಹಂಪಿಯ ತುಂಗಭದ್ರಾ ನದಿಯಲ್ಲಿ ತಾಯಿಯ ಕೈಯಿಂದ ನೀರು ಪಾಲಾಗಬೇಕಿದ್ದ ಮೋಹನ ಎಂಬ ಕೂಸನ್ನು ಉಳಿಸಿ ಶ್ರೀವೇದವ್ಯಾಸರ ಶ್ರೀಆನಂದತೀರ್ಥರು ರಚಿಸಿದ ಶಾಸ್ತ್ರ ವೆಂಬ ಸಮುದ್ರದ ನೀರಿನಲ್ಲಿ ಈಜಾಡುವವಂತೆ ಮಾಡಿದವರು ನಮ್ಮ ಶ್ರೀ ವಿಜಯಪ್ರಭುಗಳು. ಆ ಮಹಾ ಮಹಿಮರ ಹರಕೆ – ಆರೈಕೆಗಳಿಂದ ಬಡಕಲು ಮೈಯ ಆ ರೋಗಿಷ್ಟ ಕೂಸು ಒಳ್ಳೆ ಸುಂದರವಾದ ಮೋಹನಾಂಗದ ಮಗುವಾಗಿ ಬೆಳೆಯಿತು.

ಅವನನ್ನು ಬೆಳೆಸಿ ಶ್ರೀ ವಿಜಯರಾಯರು ವಿದ್ಯಾ ದಾನ ಮಾಡಿ ” ಮೋಹನ ವಿಠಲ “ ಎಂಬ ಅಂಕಿತವನ್ನು ಕೊಟ್ಟರು. ಇದೇ ಅಂಕಿತದಲ್ಲಿ ಶ್ರೀ ಮೋಹನದಾಸರು 40ಪದ – 3ಸುಳಾದಿ – 2 ಉಗಾಭೋಗವನ್ನು, ಕೀರ್ತನೆಗಳನ್ನೂ ರಚಿಸಿ, 217 ನುಡಿಯ ಒಂದು ಕೋಲು ಪದವನ್ನು ರಚಿಸಿದ್ದಾರೆ!! ಶ್ರೀ ಮೋಹನದಾಸರು ರಚಿಸಿರುವ ಕೋಲು ಪದ – ರುಕ್ಮಿಣೀ, ಸುಭದ್ರಾ, ಅರ್ಜುನ ಮತ್ತು ಶ್ರೀ ಕೃಷ್ಣ ಪರಮಾತ್ಮನ ನಡುವಿನ ಸರಸ ಸಂಭಾಷಣಾ ರೂಪವಾಗಿದೆ.ಹೊಸ ಕಲ್ಪನೆಯ ಹೊಳಿವು ಹಾಕಿ ಹಳೆಯ ರೀತಿಯಲ್ಲಿಯೂ ಚಮತ್ಕಾರದ ಮಿಂಚು ಗೊಂಚಲಾಡುವಂತೆ ಮಾಡುವುದು ಶ್ರೀ ಮೋಹನದಾಸರ ವೈಶಿಷ್ಟ್ಯವಾಗಿದೆ.

ಹೆಸರು : ಶ್ರೀ ಮೋಹನ

ತಂದೆ : ಶ್ರೀ ಭೀಮಪ್ಪನಾಯಕ

ಕಾಲ : ಕ್ರಿ ಶ 1730 – 1815

ಅಂಕಿತ : ಮೋಹನವಿಠ್ಠಲ

ಅಂಶ : ಶ್ರೀ ಮಾಂಡವ್ಯ ಋಷಿಗಳು

ಉಪದೇಶ ಗುರುಗಳು : ಶ್ರೀವಿಜಯರಾಯರು

ಸಮಕಾಲೀನ ಹರಿದಾಸರು : ಶ್ರೀಗೋಪಾಲದಾಸರು, ಶ್ರೀಜಗನ್ನಾಥದಾಸರು, ಶ್ರೀಪ್ರಾಣೇಶದಾಸರು, ಶ್ರೀಶ್ರೀದವಿಠ್ಠಲರು, ಶ್ರೀಹಯವದನವಿಠ್ಠಲ (ಶ್ರೀವಿಜಯರಾಯರ ತಮ್ಮಂದಿರು),ಶ್ರೀವೆಂಕಟವಿಠ್ಠಲ (ಶ್ರೀಹೊನ್ನಾಳಿ ದಾಸರು), ಶ್ರೀಗುರುಮಧ್ವೇಶವಿಠ್ಠಲರು (ಕೂಡ್ಲಿಗಿ ಶ್ರೀಮಧ್ವಾಚಾರ್ಯರು), ಶ್ರೀವೇಣುಗೋಪಾಲವಿಠ್ಠಲ (ಶ್ರೀಪಂಗನಾಮದ ತಿಮ್ಮಣ್ಣದಾಸರು), ಶ್ರೀವೆಂಕಟೇಶವಿಠ್ಠಲ (ಬೇಲೂರು ಶ್ರೀವೆಂಕಟಸುಬ್ಬದಾಸರು), ಶ್ರೀಮುದ್ದುವಿಠ್ಠಲ (ಶ್ರೀಮೀನಪ್ಪದಾಸರು).

ಶಿಷ್ಯರು : ಚಿಕ್ಕೆರಹಳ್ಳಿ ಶ್ರೀ ತಮ್ಮಣ್ಣದಾಸರು – ” ಶ್ರೀ ಮಧ್ವಪತಿವಿಠ್ಠಲ ”
ಚಿಪ್ಪಗಿರಿ ಶ್ರೀ ವೆಂಕಟದಾಸರು – ಶ್ರೀ ತಂದೆ ಮೋಹನವಿಠ್ಠಲ ( ಶ್ರೀ ಮೋಹನದಾಸರ ಮಗ )
ಶ್ರೀ ಗುರುಮೋಹನವಿಠ್ಠಲ

ಚೀಕಲಪರವಿಯಲ್ಲಿ ಅವರಿಗೆ ಅಪಮೃತ್ಯು ಬಂದಾಗ ಅದನ್ನು ಸಹ ಪರಿಹಾರವನ್ನು ಮಾಡಿದ ಮಹಾನುಭಾವರು ನಮ್ಮ ವಿಜಯದಾಸರು.

ಚಿರಂಜೀವಿಯಾಗೆಲೋ ಚಿಣ್ಣ ನೀನು ಪರಮಭಾಗವತರ ಪದಧೂಳಿ ಧರಿಸುತಲಿ

ಒಂದು ಕಡೆ ಮೋಹನದಾಸರು ಶ್ರೀ ವಿಜಯದಾಸರು ಬಗ್ಗೆ ಹೇಳುತ್ತಾರೆ.

ವಿಜಯದಾಸರ ಪಾದ ಭಜಿಸಿದವಗನವರತ | ವಿಜಯವಾಗುವದಕ್ಕೆ ಸಂಶಯವ್ಯಾಕೆ||.
ಶುಭಗಳಾಗಲಿ ಅಶುಭಗಳು ಓಡಲಿ |
ಇಭವರದನೊಲುಮೆ ದೊರೆಯಲಿ ಕೋಲೆ ||
ಇಭವರದ ನೊಲುಮೆ ದೊರೆಯಲಿ ನಮ್ಮ | ವಿಜಯಪ್ರಭುಗಳ ಕೀರ್ತಿ ಮೆರೆಯಲಿ ಕೋಲೆ ||

ಶ್ರೀವಿಜಯದಾಸರ ರಚನೆ
ರಾಗ : ಕಲ್ಯಾಣಿ ತಾಳ : ಝಂಪೆ

ಪಾಹಿ ಮೋಹನ ವಿಠಲ ಪರಮ ಕರುಣಾ ಜಲನಿಧೆ ।
ಮಹದಾದಿ ದೇವ ವಂದ್ಯ ।
ಮೋಹ ಪಾಶವ ಬಿಡಿಸಿ ನಂಬಿದವಗೆ ವೊಲಿದು ।
ರಹಸ್ಯ ಮತಿ ಕೊಡುವುದು ಸ್ವಾಮಿ ।। ಪಲ್ಲವಿ ।।

ನೀನಿತ್ತ ಮಾತುಗಳು ಪೊಳ್ಳಗ ಬಲ್ಲವೇ ।
ಅನಂತ ಜನಮದಾಗೆ ।
ಆನೊಬ್ಬ ನೆನ್ನದಿರು । ಕೀರ್ತಿಸು ।
ವ ನರನೆಂದು ಜ್ಞಾನಿಗಲಿರುದಾಗಿದೆ ।।
ಏನಯ್ಯಾ ನಿನ್ನಂಘ್ರಿ ಭಜಿಸದಿಪ್ಪ ।
ಮಾನವನ ಕ್ಲೇಶಕೆಣಿಯೆ ।
ಆನಂದ ನಂದನೆ ತೃಣವ ಪಿಡಿದು । ರ ।
ತುನವನು ಮಾಡಿ ತೋರುವ ಸ್ವಾಮಿ ।। ಚರಣ ।।

ನಿನ್ನಧೀನ ಕರ್ಮ ಸ್ವಭಾವ ಮೊದಲಾಗಿ ।
ಅನ್ಯಥಾ ಎಲ್ಲಿ ಕಾಣೆ ।
ಮನ್ನಿಪುದು ಮುದದಿಂದ ಮೋದದಲ್ಲಿ ।
ಎನ್ನ ಬಿನ್ನಪವನು ಬಿರಿದೆನಿಸಿದೆ ।।
ಅನ್ಯರಿದರೊಳಗಿಲ್ಲ ಯೆನ್ನ ಪೊಂದಿದವನು ।
ನಿನ್ನ ದಾಸರ ದಾಸರು ಉನ್ನತ ।
ಗುಣವಿತ್ತು ಉರುಕಾಲ ವೊಲಿದು ।
ಪ್ರಸನ್ನನಾಗೋಪಾವನ್ನಾ ರನ್ನಾ ।। ಚರಣ ।।

ನರರಿಗೆ ಸಾಧನಾ ಸತ್ಕೀರ್ತನೆಯೆಂದು ।
ಪರಮೇಷ್ಠಿ ಒಲಿಪನಾಹಕೊ ।
ಪರಿ ಪರಿಯಿಂದ ಕರ್ಮಗಳ ಮಾಡಿದರೆ ।
ದುರಿತ ಬೆಮ್ಮೊಗವಾಗವು ।।
ಪಿರವಾಗಿ ಬೇಡಿದೆನೋ ವಿಜಯವಿಠ್ಠಲ ನಿನ್ನ ।
ಶರಣರೊಳಗಿಡು ಕಾಪಾಡು ।
ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ।
ಧರೆಯೊಳಗೆ ಪರಿಪೂರ್ಣವಾಗಿ ಇರಲಿ ಸ್ವಾಮಿ ।। ಚರಣ ।।

ಅವತಾರ ಸಮಾಪ್ತಿ : ಶ್ರೀ ವಿಜಯರಾಯರಿಂದ ರಕ್ಷಿಸಲ್ಪಟ್ಟು; ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ; ಅವರಿಂದಲೇ ಅಂಕಿತೋಪದೇಶವನ್ನು ಪಡೆದು 40 ಪದ – 3 ಸುಳಾದಿ – 2 ಉಗಾಭೋಗವನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಶ್ರೀ ವಿಜಯರಾಯರು ನೆಲೆನಿಂತ ಪರಮ ಪವಿತ್ರವಾದ ಚಿಪ್ಪಗಿರಿ ಕ್ಷೇತ್ರದಲ್ಲಿ ” ಜ್ಯೇಷ್ಠ ಶುದ್ಧ ಷಷ್ಠಿ “ ಯಂದು ಶ್ರೀ ಮಾಂಡವ್ಯ ಋಷಿಗಳ ಅಂಶ ಸಂಭೂತರಾದ ಶ್ರೀಮೋಹನದಾಸರು ಶ್ರೀ ಹರಿಧ್ಯಾನಪರರಾದರು!!

ಮೋಹಭಯ ದುಃಖಾದಿದೂರಂ ಲೋಹಲೋಷ್ಠ ಸಮೇಕ್ಷಣಂ |
ಮಾಹಿತಾಂಘ್ರಿ ಸರೋಜಭೃಂಗಂ ಮೋಹನಾರ್ಯ ಗುರುಂ ಭಜೇ ||

ಅರ್ಥ:  ಮಮಕಾರ,ಹೆದರಿಕೆ ಮತ್ತು ದುಃಖವಿಲ್ಲದವರು, ಬಂಗಾರ,ಬೆಳ್ಳಿ ಮೊದಲಾದ ಬೆಲೆ ಬಾಳುವ ವಸ್ತುಗಳೂ, ಕಲ್ಲೂ ಒಂದೇ ಎಂದು ಕಾಣುವ, ಸರ್ವೋತ್ತಮನಾದ ಶ್ರೀಹರಿಯ ಪಾದಕಮಲಕ್ಕೆ ದುಂಬಿಯಂತೆ ಸೇರಲು ಆಸಕ್ತರಾದ ಗುರುಗಳಾದ ಮೋಹನದಾಸವರ್ಯರನ್ನು ಭಜಿಸುತ್ತೇನೆ.

ಯುಕ್ತಿಯಲ್ಲಿ ಮೋಹನ್ನ ಎನ್ನುವ ಹಿರಿಯರ ವಾಣಿಯಂತೆ ಶ್ರೀ ವಿಜಯದಾಸರ ಸಾಕು ಮಕ್ಕಳಾದ ಶ್ರೀಮೋಹನದಾಸರ ಕೋಲಾಟದ ಕೃತಿಯಲ್ಲಿ ಕೆಲವು ನುಡಿಗಳು.

ಎಲ್ಲಾ ಒಂದೇ ಎಂದು ವಾದ ಮಾಡುವ ಜನರಿಗೆ ಅವರು ಕೊಟ್ಟ ಉತ್ತರ.
ಕತ್ತೆ ಕುದುರೆ ಒಂದೇ |
ಅತ್ತೆ ಸೊಸೆಯು ಒಂದೇ | ಹೆತ್ತಮ್ಮ ಒಂದೇ ಹೆಂಡತಿ ಒಂದೇ ಕೋಲೆ ||
ಹೆತ್ತಮ್ಮ ಒಂದೇ ಹೆಂಡತಿ | ಒಂದಾದ ಮೇಲೆ| ಮತ್ತೆ ಮದುವೆ ನಿನಗ್ಯಾಕೆ ಕೋಲೆ ||

ಹಿಟ್ಟು ಬೂದಿಯೊಂದೆ | ರೊಟ್ಟಿ ಮುಚ್ಚಳಿಯೊಂದೆ |
ಕಟ್ಡಿಗೆ ಒಂದೆ ಕಬ್ಬೊಂದೆ ಕೋಲೆ |
ಕಟ್ಟಿಗೆ ಒಂದೆ ಕಬ್ಬೊಂದಾದ ಮೇಲೆ |
ಕಟ್ಟಿಗೆ ಯಾಕೆ ಮೆಲ್ಲುವಲ್ಲಿ ಕೋಲೆ ||

ಹೀಗೆ ಹೇಳುತ್ತಾ ಮುಂದೆ ಸುಭದ್ರ ದೇವಿ ದ್ವಾರಕಾ ಪಟ್ಟಣಕ್ಕೆ ಮುಯ್ಯ ಕೊಡಲು ಬಂದಾಗ ಯಾರು ಬರುವದಿಲ್ಲ ಅರಮನೆ ಒಳಗಿನಿಂದ. ಆಗ ಸುಭದ್ರ ಹೇಳುತ್ತಾಳೆ.

ತಾಯಿ ಮನೆಗೆ ಬಂದು ಬಹಳ ಹೊತ್ತಾಯಿತು|
ತಾಯಿ ಸೊಸೆಯರು ಬರಲಿಲ್ಲ ಕೋಲೆ |
ತಾಯಿ ಸೊಸೆ ಯರು ಬರಲಿಲ್ಲ | ನಮಗಂಜಿ
ಬಾಯಿ ಬಿಡುತಾರೆ ಒಳಗೆಲ್ಲ‌ ಕೋಲೆ ||

ಅವಾಗ ರುಕ್ಮಿಣಿ ದೇವಿ ಬಂದು ಉಪಚಾರ ಮಾಡಿದಾಗ ಸುಭದ್ರೆ ಹೇಳುವ ಮಾತು.

ಓಡಿ ಬಂದವಳು ಒಳಗೆ ಸೇರಿಕೊಂಡು ನೋಡುವಳೆ | ನಮ್ಮ ನುಡಿಸುವಳೇ ಕೋಲೆ |
ನೋಡುವಳೇ ನಮ್ಮ ನುಡಿಸುವಳೇ ನಮ್ಮಣ್ಣ | ಮಾಡಿದ ಮೋಹ ತಲೆಗೇರಿತು ಕೋಲೆ ||
ಅಣ್ಣನ ವಂಚಿಸಿ ಓಡಿ ಬಂದವಳೆನ್ನ |
ತಣ್ಣಿಲಿ ನೋಡಿ ಕರೆಯುವಳೇ ಕೋಲೆ |
ತಣ್ಣಿಲಿ ನೀಡಿ ಕರೆಯುವಳು ನಮ್ಮ ಅಣ್ಣನ ಬಲವ | ಹಿಡಕೊಂಡು ಕೋಲೆ ||

(ಅಣ್ಣನಾದ ರುಕ್ಮಿಗೆ ಹೇಳದೇ ಕೃಷ್ಣನ ಜೊತೆಯಲ್ಲಿ ರುಕ್ಮಿಣಿ ದೇವಿ ಬರುವಳು. ಬಂದಂತಹ ರುಕ್ಮಿಣಿ ನಮ್ಮ ಅಣ್ಣ ನಾದ ಕೃಷ್ಣ ನ ಬಲದಿಂದ ಇಲ್ಲಿ ದ್ವಾರಕೆಯಲ್ಲಿ ಮೆರೆಯುತ್ತಾ ಇರುವಳು ಅಂತ ಸುಭದ್ರ ಹೇಳುವ ಮಾತು)
ಇದಕ್ಕೆ ರುಕ್ಮಿಣಿ ದೇವಿ ಉತ್ತರ.

ಅಣ್ಣನ ವಂಚಿಸಿ ಓಡಿ ಬಂದವಳೆಂದು |
ಎನ್ನ ನೀ ನುಡಿವೆ ಸುಭದ್ರೆ ಕೋಲೆ |
ಎನ್ನ ನೀ ನುಡಿವೆ ಸುಭದ್ರೆ ಕೇಳು |
ನಾ ಸನ್ಯಾಸಿ ಯೊಡನೆ ಬರಲಿಲ್ಲ ಕೋಲೆ ||
(ನಿನ್ನ ಹಾಗೆ ಸನ್ಯಾಸಿ ವೇಷ ಧಾರಿಯ ಜೊತೆ ಓಡಿ ಹೋಗಲಿಲ್ಲ ನಾನು
ಜಗತ್ಪತಿಯಾದ ಕೃಷ್ಣ ನ ಜೊತೆಗೆ ಬಂದೆ ಅಂತ ಹೇಳುತ್ತಾಳೆ.)

ಅಷ್ಟು ಹೊತ್ತಿಗೆ ವಾದ ವಿವಾದ ಆದ ಮೇಲೆ ಕೃಷ್ಣ ಮಲಗಿದ್ದವನು ಎದ್ದು ಕೂಡುತ್ತಾನೆ.
ಅರ್ಜುನ ನನ್ನು ಕಂಡು ಮಾತಾಡಿಸುವ. ನಂತರ ಕೃಷ್ಣ ಅರ್ಜುನ ಇಬ್ಬರಿಗು ವಿನೋದ ಭರಿತವಾದ ಸಂವಾದ ನಡೆಯುತ್ತದೆ.

ರಾಗ : ನಾದನಾಮಕ್ರಿಯೆ ತಾಳ : ಆದಿ

ಪಾಹಿ ಪಾಹಿ ಗುರು ಮೋಹನರಾಯಾ ।। ಪಲ್ಲವಿ ।।

ಪಾಹಿ ಪಾಹಿ ಗುರು ಮೋಹನ ಸಿಂಧುರ ।
ವಾಹನ ಪದ ಪಂಕೇರುಹ ಭೃಂಗ ।। ಅ. ಪ ।।

ನವ ಭಕುತಿಗಳೆಂಬೋ ಸರಪಳಿಯೊಳು ।
ನವ ನವ ರೂಪದಿ ನಲಿವ ಸುಧೀರಾ ।। ಚರಣ ।।

ಪದುಮನಾಭನ ಧ್ಯಾನದ ಮದವೇರಿ ।
ಪದೆಪದೆಗೆ ಹರಿಪದವಾ ಗಾವಾ ।। ಚರಣ ।।

ವಿಜಯದಾಸರ ಪದರಜವ ಧರಿಸಿ ।
ವೀರಜ ಪ್ರಾಣೇಶವಿಠ್ಠಲನ ಭಜಿಸಿದಿ ।। ಚರಣ ।।