Harapanahalli Bheemavva

 

  • Period : 1822 – 1903
  • Name : BHeemavva
  • Ankitha : Bheemesha Krishna
  • Upadesha Guru : Naradaru (in Dream)
  • Aradhana Tithi :  Pushya Shuddha Trayodashi
  • Place : Harapanahalli

 

ಹರಪನಹಳ್ಳಿ ಭೀಮವ್ವನವರು

ಕಾಲ ಕ್ರಿ.ಶ. 1822 -1903
ವ್ಯವಹಾರನಾಮ ಭೀಮವ್ವ
ಅಂಕಿತ ಭೀಮೇಶಕೃಷ್ಣ (ಸ್ವಪ್ನಲಬ್ಧ)
ಉಪದೇಶ ಗುರು ನಾರದರು (ಸ್ವಪ್ನ)
ಪುಣ್ಯ ತಿಥಿ ಪುಷ್ಯ ಶುದ್ಧ ತ್ರಯೋದಶಿ
ಸ್ಥಳ ಹರಪನಹಳ್ಳಿ

 

ನಾರದಾದಾಪ್ತ ಸದ್ಬೋಧಾಂ – ಸಾಧ್ವೀ ಸಾಹಿತ್ಯ ಕಾರಿಣೀಂ |
ಭೀಮೇಶ ಕೃಷ್ಣ ನಿರತಾಂ – ವಂದೇ ಭೀಮವ್ವ ಮಾತರಂ ||

नारदादाप्त सद्बोधां – साध्वी साहित्य कारिणीं ।
भीमेश कृष्ण निरतां – वंदे भीमव्व मातरं ॥

nAradAdApta sadbodhAM – sAdhvI sAhitya kAriNIM |
BImeSa kRuShNa niratAM – vaMde BImavva mAtaraM ||

=====================================================

ಹೂವ ಮುಡಿಸಿರೆ ಮುಡಿಗ್ಹರಸುತಲಿ
ಮುತ್ತೈದೆಯಾಗೆನುತ
ಹೂವ ಮುಡಿಸಿರೆ ಮುಡಿಗ್ಹರಸುತಲಿ|| ಪ||

ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ
ಸುರಪಾರಿಜಾತ ಸಂಪಿಗೆ ಸತ್ಯಭಾಮೆಗೆ ||1||

ಅರಿಷಿಣ ಕುಂಕುಮ ಬೆರೆಸಿದ ಮಲ್ಲಿಗೆ
ಸುರಪಾರಿಜಾತ ಪುನ್ನಾಗ ಪುಷ್ಪಗಳ ||2||

ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ
ಅರಳು ಮಲ್ಲಿಗೆಯ ಭೀಮೇಶಕೃಷ್ಣನ ಸತಿಗೆ||3||

=============================================================
ಹರಪನಹಳ್ಳಿ ಭೀಮವ್ವನವರ ಕೆಲವು ರಚನೆಗಳು

ಹೂವ ಕೊಡೆ ನೀ ವರವ ಕೊಡೆ
ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ||

ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳು
ಮುತ್ತೈದೆತನವ ಮುದದಿಂದ
ಮುತ್ತೈದೆತನವ ಮುದದಿ ಬೇಡುವೆ
ಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ ||

ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳು
ಬಂಧುಗಳಿಗೆಲ್ಲ ಬಲುಕ್ಷೇಮ
ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ
ಇಂದಿರಾದೇವಿ ದಯಮಾಡೆ ||

ದಂಪತಿ ನಲಿಸುತ ಸಂಪತ್ತು ಸೌಭಾಗ್ಯ
ಇಂಥ ಮಂದಿರಕೆ ಬಹುಮಾನ
ಇಂಥ ಮಂದಿರಕೆ ಬಹುಮಾನಯಿರುವಂತೆ
ಸಂತೋಷದಿ ವರವ ದಯಮಾಡೆ ||

ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನಹಿ-
ರಣ್ಯದಾನಗಳ ಹಿತದಿಂದ ಹಿ-
ರಣ್ಯದಾನಗಳ ಹಿತದಿಂದ ಮಾಡುವಂತೆ ಸಂ-
ಪನ್ನ ನೀ ವರವ ದಯಮಾಡೆ ||

ಇಂದಿಗೆ ಮನೋಭೀಷ್ಟ ಎಂದೆಂದಿಗೆ ನಿನಪಾದ
ಹೊಂದಿರಲೆಂದೂ ಮರೆಯದೆ
ಹೊಂದಿರಲೆಂದೂ ಮರೆಯದೆ ಭೀಮೇಶಕೃಷ್ಣನ-
ರ್ಧಾಂಗಿ ನೀ ವರವ ದಯಮಾಡೆ ||

=====================================================

ಮಂಗಳಾರತಿ ತಂದು ಬೆಳಗಿರೆ ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ ಶಶಿ ಬಿಂಬೆಗೆ

ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ

ಎರೆದು ಪೀತಾಂಬರವನುಡಿಸಿ ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ ವರಮಹಾಲಕ್ಷ್ಮಿ ದೇವಿಗೆ

ಹುಟ್ಟುಬಡವೆಯ ಕಷ್ಟಕಳೆದು ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ ಶುಕ್ರವಾರದ ಲಕ್ಷ್ಮಿಗೆ

ನಿಗಮ ವೇದ್ಯಳೆ ನಿನ್ನ ಗುಣಗಳ ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ ಜಗದೊಡೆಯನ ಭೀಮೇಶ ಕೃಷ್ಣನ ರಾಣಿಗೆ

=====================================================