ಕಂಕಣಾಕಾರ ಸುಳಾದಿ

ರಾಗ: ಭೈರವಿ ಧೃವ ತಾಳ

ಕಂಕಣಾಕಾರವನ್ನು ಬರೆದು ಅದರ ಮಧ್ಯ |
ಓಂಕಾರ ಎರಡು ಎಡ-ಬಲದಿ ರಚಿಸಿ |
ಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ |
ನಾಂಕನಯ್ಯನ ಪೀಠಸ್ಥಳವಿದೆಂದು |
ಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆ ಎರಡಾ |
ಲಂಕಾರವನೆ ಮಾಡಿ ಅದರ ಬಳಿಯ |
ಕಂಕಣಾಕಾರವನ್ನು ಒಳಗೆ ಮಾಡಿಕೊಂಡು |
ಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿ |
ಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿ |
ಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊ |
ಪಂಕಜ ಪಾಣಿಯು ಶ್ರೀ – ಭೂ – ದುರ್ಗಾನಾಮಕಳು |
ಪಂಕಜಾಕ್ಷನ ರೂಪ ಮೂರು ಉಂಟು |
ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು |
ಸಂಕೋಚವಾಗಿ ಇದೆ ದ್ವಿತೀಯ ವಲಯ |
ಪಂಕಜ ಮಿತ್ರ ಸೋಮ ಅಗ್ನಿ ಜನರ ನಾಗ
ಕಂಕಣ ಅನಲ ವರುಣ ದಿಕ್ಕಿಗೆ ರಚಿಸಿ |
ಕಿಂಕರ ಜನಪಾಲ ವಿಜಯ ವಿಠ್ಠಲ ಅಕ |
ಳಂಕನ ಭಜಿಸುವುದು ಹೃದಯದಲಿ ತಿಳಿದು ||೧||

ಮಟ್ಟ ತಾಳ
ಕರಿ ಅಜ ರಥ ವೀಥಿ ಎಂದೆಂಬುವೆ ಮೂರು |
ಬರೆದು ಇದಕೆ ಹನ್ನೆರಡು ರಾಶಿಗಳು ವಿ- |
ಸ್ತರವಾಗಿ ಉಂಟು ಎರಡೆರಡು ವೊಂದು ಕಡೆ |
ಅರಿವದು ಸ್ಥಿಮಿತ ಸಮಗತಿ ತ್ವರಗತಿ ಸೂರ್ಯನ್ನ |
ಎರಡು ನಾಲಕು ಕೋಣೆ ವಿರಚಿಸಿ ಅದರ ಮೇಲೆ |
ಮರಳೆ ಮಧು – ಮಾಧವಾ ಕರೆಸುವ ಋತು ಒಂದು |
ಬರೆದು ಪ್ರಣವ ವಿವರ ಹೃದಯದಲ್ಲಿ ನಮ |
ಸ್ಕರಿಸು ಜ್ಞಾನಾತ್ಮನೆಂದು |
ಧರಿಸು ಈ ಪರಿ ಮೂರು ಎರಡು ಕೋಣಿಯ ಮಧ್ಯ |
ತರುವಾಯ ಮಾಸ – ಋತು ವರುಷ ತಾರಕ ಸಂ |
ಸ್ಮರಿಸಿ ಕ್ರಮ ವರ್ಣ ಹರಿ ಐಶ್ವರ್ಯಾದಿ |
ಪರಮ ಮೂರ್ತಿಗಳನ್ನು ಶಿರಸು ಮೊದಲು ಮಾಡಿ |
ಕರತಳ ಪದತನಕ ಚರಿತೆಯಾಕೊಂಡಾಡು |
ಗುರುತು ಆರು ಕೋಣೆ ಸರಿ ಉಪರಿಭಾಗ |
ಎರಡರ ಮಧ್ಯ ವರಣಂಗಳು ಉಂಟು |
ಅರಹುವೆ ಪ್ರಥಮದಲ್ಲಿ ಎರಡೆರಡು ನಾಲ್ಕು

೧. – “ಅ,ಆ,ಕ,ಖ,ಡ,ಢ,ಮ,ಯ” |
೨. ಎರಡೆನೆಯ ಮನಿಯಲ್ಲಿ ವರಣಗಳಿಪ್ಪವಯ್ಯ |
“ಇ,ಈ,ಉ,ಊ,ಗ,ಘ,ಣ,ತ,ರ,ಲ” |
೩. ಸ್ಮರಿಸು ಮೂರನೆ ಮನಿಯಲ್ಲಿರುತಿಪ್ಪ ಮಾತ್ರ “ಋ,ೠ,ಲೃ,ಲೄ,ಙ,ಚ,ಥ,ದ,ವ,ಶ” |
೪. ಕರಿಸಿಕೊಂಡವು ಇನಿತು ನಾಲ್ಕನೆ ಸ್ಥಾನದಲಿ
“ಎ,ಐ,ಛ,ಜ,ಧ,ನ,ಷ,ಸ” |
೫. ವರಣಂಗಳು ಗ್ರಹಿಸು ಐದನೆ ಮನಿಯಲ್ಲಿ |
“ಓ,ಔ,ಝ,ಞ,ಪ,ಫ,ಹ,ಳ” |
೬. ನಿರುತ ಇಪ್ಪದು ಕೇಳಿ ಕಡಿಯಣ ಮನಿಯಲ್ಲಿ |
“ಅಂ,ಅಃ,ಟ,ಠ,ಬ,ಭ,ಕ್ಷ” ಬರೆದು ಈ ಪರಿಯಲ್ಲಿ ಆರುಮನಿಯ ಮಧ್ಯ |
ಸರಿ ಇಲ್ಲಿಗೆ ಎನ್ನಿ ತರುವಾಯ ನಾಲ್ಕು |
ಎರಡೂ ವಲಯಾಕಾರ ಎರಡು ಕೋಣಿಯ ಗಣಿತ |
ನಿರೀಕ್ಷಿಸಿ ಮನದಲ್ಲಿ ಪರಿಶುದ್ಧನಾಗಿ |
ಪರಮಪುರುಷ ನಮ್ಮ ವಿಜಯವಿಠ್ಠಲ ಮೂರ್ತಿಯ |
ಸ್ಮರಿಸು ಅಜ್ಯಾದಿಗಳ ನರಸಿಂಹ ಪರಿಯಂತ ||೨||

ರೂಪಕ ತಾಳ

ಆರು ಕೋಣಿಯ ಮೇಲೆ ವರ್ತುಳಾಕಾರವನ್ನು |
ಚಾರುವಾಗಿ ಬರೆದು ಅದರ ಸುತ್ತಲು ಎಂಟು |
ವಾರಿಜ ದಳವನ್ನು ರಚಿಸಿ ರಮ್ಯವಾಗಿ |
ಸೌರಿ ಸ್ವರ್ಭಾನು ಗುರು ಬುಧ ಶುಕ್ರ ಚಂದ್ರಮ |
ಧಾರುಣಿಸುತ ಕೇತು ಇವರನ್ನ ಮಧ್ಯ |
ಹಾರೈಸಿ ಬರೆದು ಇವರಿವರ ಬಳ್ಳಿಯಲ್ಲಿ ಓಂ-|
ಕಾರ ಸಹಿತವಾಗಿ ನಮೋನಾರಾಯಣನೆಂಬೊ |
ಈರೆರಡು ನಾಲ್ಕು ವರ್ಣಗಳು ಓಂದೊಂದರಲ್ಲಿ |
ಆರಾಧಿಸಿ ಬರೆದು ಬೀಜಾಕ್ಷರವೆನ್ನು |
ಸಾರವನ್ನು ತಿಳಿ ಎಂಟು ವರ್ಣಮಿಳಿತ |
ತಾರಮಂತ್ರವೆ ಸತ್ಯ ಇದರ ನಿಯಾಮಕ ವಿಶ್ವ |
ಮೂರುತಿ ಮೊದಲಾದ ಅಷ್ಟ ರೂಪಂಗಳುಂಟು |
ಸೌರಿ ರಾಹು ಮಧ್ಯ ಆದಿ ವರ್ಣವೆ ಲಿಪಿಸಿ |
ದ್ವಿರಷ್ಟ ಮಾತ್ರಾ ವರ್ಗವ ಇದಕೆ ಇಂದಿರಾ |
ಮಾರುತ ದೇವನ್ನ ಬರೆದು ಶ್ರುತಿ ಕಾಲಗಳ |
ಈ ರೀತಿಯಿಂದಲಿ ವಿಶ್ವನ್ನ ಸ್ಮರಿಸೆ |
ಕಾರುಣ್ಯ ಮಾಡುವನು ಮುಂದೆ ಕ ವರ್ಗ ಉ- |
ಕಾರ ತೈಜಸ ದೇವನ ಬರೆದು ಕ ವರ್ಗಕ್ಕೆ |
ಧಾರುಣಿ ಉದಕಾಗ್ನಿ ವಾಯು ಗಗನ ಭೂತ |
ಮೂರೆರಡು ಸ್ಥಾಪಿಸಿ ಅಲ್ಲಿ ಮಾನಿಗಳನ್ನು |
ತಾರೇಶ-ಸ್ವರ್ಭಾನು ಮಧ್ಯದಲ್ಲಿ ಸಿದ್ಧಾ |
ಆ ರೋಹಿಣೆಯ-ಗುರು ಈರ್ವರ ನಡುವೆ ಮ- |
ಕಾರ ಪ್ರಾಜ್ಞ ಮೂರುತಿ ಚ ವರ್ಗ ಒಂದೊಂದಕೆ |
ಈರೆರಡು ಮೇಲೊಂದು ಜ್ಞಾನೇಂದ್ರಿಯಗಳುಂಟು |
ವಾರ ವಾರಕೆ ಬಿಡದೆ ತತ್ವೇಶರುಗಳವಾಸ |
ತೋರುವ ತುರ್ಯದೇವನು ಟ ವರ್ಗಕೈದು |
ಮೀರದೆ ಕರ್ಮೇಂದ್ರಿಯ ಪಾಣಿ ಪಾದದಿ ಪಂಚ |
ಕಾರಣಿಕರಲ್ಲಿ ವಸ್ವಾದಿ ನಿರ್ಜರರೂ |
ಸಾರಿರೈ ಬುಧ-ಶುಕ್ರ ಅಂತರಾಳದಲ್ಲಿ ವಿ- |
ಸ್ತಾರ ಇದನೆ ತಿಳಿದು ಶುಕ್ರ-ಚಂದ್ರನ ನಡುವೆ |
ಭೊರನ್ನ ಆತ್ಮಾಮೂರುತಿ ಬಿಂದು ತ ವರ್ಗ |
ಪೂರೈಸು ಪಂಚ ತನ್ಮಾತ್ರಗಳು ಶಬ್ದಾದಿ |
ಮಾರುತಗಳೈದು ಪ್ರಾಣಾದಿ ನಾಮದಲ್ಲಿ ಸೇರಿ ಕೊಂಡಿಪ್ಪರೈ ಮುಂದೆ ಲಾಲಿಸಿ ಕೇಳಿ |
ಗೌರೀಶನ ಶಿರದಲ್ಲಿ ಇಪ್ಪ ಕುಜನ ನಡುವೆ |
ಮೂರುತಿ ಆಂತರಾತ್ಮನು ಘೋಷ ಪ ವರ್ಗ |
ಆರನೇ ಮನೆ ಎನ್ನಿ ಇಲ್ಲಿಪ್ಪದು ಅಹಂ- |
ಕಾರ-ಬುದ್ಧಿ-ಚಿತ್ತ-ಮನಸು-ಚೇತನ ತತ್ವ |
ಮಾರಾರಿ ಮಿಗಿಲಾದ ದೇವತಿಗಳಕ್ಕು |
ಧಾರುಣಿಸುತ ಕೇತು ಇವರ ಮಧ್ಯದಲ್ಲಿ |
ಶ್ರೀರಮಣ ಪರಮಾತ್ಮ ಶಾಂತವೆಂಬೋದು ಓಂ- |
ಕಾರದೊಳಗಿನ ವರ್ಣ ಯ ವರ್ಗ ಚತುರ್ವಿಧಾ |
ಆರೊಂದು ಧಾತುಗಳು ತ್ವಕ್-ಚರ್ಮ-ರಕ್ತಾದಿ |
ವಾರಿಜ ಮಿತ್ರನ್ನ ಮುಸುಕುವನ ಶನಿ ಮಧ್ಯ |
ಬೀರುವೆನು ಜ್ಞಾನಾತ್ಮ ಅತಿಶಾಂತ ಶ ವರ್ಗ- |
ಕ್ಷಾಂತ ಸತ್ವ ರಜ ತಮ ತ್ರಯಾವಸ್ಥಿಗಳು ತಾರ ನಮೋ ನಾರಾಯಣವೆಂಬೊವೆಂಟು |
ಸೌರಿ ಮಿಕ್ಕಾದೆಂಟು ದಳದಲ್ಲಿ ಲಿಖಿಸೋದು |
ವಾರಿಜಭವನಯ್ಯ ವಿಜಯವಿಠ್ಠಲರೇಯ |
ಶರೀರದೊಳಗಿದ್ದು ತನ್ನವಗೆ ತಿಳಿಪುವಾ ||೩||
ಝಂಪೆತಾಳ

ಹನ್ನೆರಡು ದಳವುಳ್ಳ ಕಮಲ ವಲಯಾಕಾರ |
ಚನ್ನಾಗಿ ಬರೆಯುವುದು ಇದರ ಮೇಲೆ |
ಇನ್ನು ಒಂದೊಂದು ದಳದೊಳಗೆ ಲಿಖಿಸಲಿಬೇಕು |
ಮನ್ನಿ ಪದು ಜ್ಞಾನಿಗಳು ಬಾಲಬೋಧ |
ಮುನ್ನಾದಿ ದಳದಲ್ಲಿ ಮೇಷರಾಶಿಯ ಬರೆದು |
ಬಿನ್ನಣದಿ “ಓಂ ಓಂ” ಇದಕೆ ಕೇಶವಮೂರ್ತಿ |
ಭಿನ್ನ ವರ್ಣಂಗಳು “ಅ ಕ ಡ ಮ” ವೆಂಬವು ನಾಲ್ಕು |
ಇನ್ನಿತು ತಚಿಸಿ ಎರಡನೇದಳದಲ್ಲಿ |
ಸನ್ನುತಿಸು ವೃಷಭ “ಆ ಖ ಢ ಯ” ಚತುರವರ್ಣಗಳು |
“ಓಂ ನಂ” ನಾರಾಯಣ ಮೂರ್ತಿ ನೆನೆದು |
ಘನ್ನ ಮೂರನೆ ದಳದಿ ಮಿಥುನ ರಾಶಿಯ ಬಳಿಯ |
ವರ್ಣಿಸಿ “ಓಂ ಮೋಂ” ಮಾಧವದೇವನ್ನ |
ಗಣ್ಯ “ಇ ಗ ಣ ರ” ನಾಲ್ಕು ಮಾತ್ರಗಳ ಬರೆದು ನಿಜ- |
ವೆನ್ನಿ ನಾಲ್ಕನೆ ದಳಕೆ ಮನಸು ಮಾಡಿ |
ಪುಣ್ಯವೇ ಉಂಟು ಕರ್ಕರಾಶಿ “ಈ ಘ ತ ಲ” |
ವನ್ನು “ಓಂ ಭಂ” ವರ್ಣ ಗೋವಿಂದನು |
ನಿನ್ನೊಳಗೆ ತಿಳಿವುದೂ ಐದನೆ ಪತ್ರದಲಿ |
ಪೆಣ್ಣುಗಳ ಮಧ್ಯದಾ ಪೆಸರಿನ ರಾಶಿ |
“ಉ ಊ ಙ ಥ ವ” “ಓಂ ಗಂ” ಇದಕೆ ವಿಷ್ನುಮೂರ್ತಿ |
ಕನ್ಯೆಯಲಿ “ಋ ೠ ಚ ದ ಶ” “ಓಂ ವಂ” ವರ್ಣ ಮಧುಸೂ- |
ದನ ದೇವನ ಭಜಿಸು ಷಡ್‍ದಳದಲ್ಲಿ |
ಸನ್ಮತವಹುದು ತುಲಾರಾಶಿ “ಲೃ ಲೄ ಛ ಧ ಷ” ಗಳು |
ಇನ್ನು ತ್ರಿವಿಕ್ರಮ “ಓಂ ತೇಂ”(ಓಷ್ಠಾ) ಸಪ್ತಮ ದಳದಿ |
ಮಣ್ಣು ಭಕ್ಷಿಪ ಕ್ರಿಮಿ “ಏ ಐ ಜ ನ ಸ” ವರ್ಣ |
“ಓಂ ವಾಂ” ವಾಮನ ಅಷ್ಟಮ ದಳದಿ |
ಹೊನ್ನಿನಂಥ ಮಾತು ಧನು ರಾಶಿ ಲಿಪಿಸೆ ಸಂ- |
ಪನ್ನ “ಓ ಝ ಪ ಹ” “ಓಂ ಸುಂ” ಶ್ರೀಧರ |
ಇನ್ನು ನೋಡು ಪತ್ರ ನವಮದಲಿ ಈ ಪರಿ |
ಎನ್ನು ಗ್ರಹಿಸುವುದು ಹತ್ತು ದಳದಿ |
ಇನಿತಾದರು ಸತ್ಯ ಮಕರ “ಜ ಞ ಫ ಳ” “ಔ ದೇ” |
ಅನಂತರೂಪಾತ್ಮಕ ಹೃಷೀಕೇಶ ಹನ್ನೊಂದನೆ ದಳದಲ್ಲಿ ಕುಂಭ |
“ಅಂ ಟ ಭ ಕ್ಷ” “ಓಂ” ಎನ್ನು “ವಾಂ” ಇದಕೆ ಶ್ರೀ ಪದ್ಮನಾಭ |
ಹನ್ನೆರಡನೇ ದಳದಿ ಮೀನ “ಅಃ ಠ ಭ” ಚೆನ್ನಾಗಿ ರಚಿಸಿ “ಓಂ ಯಂ” ದಾಮೋದರ |
ಹನ್ನೆರಡು ದಳದೊಳಗೆ ಇಷ್ಟೆ ಭಗವದ್ರೂಪ |
ಹನ್ನೆರಡು ಮಾತೃಕೆಯ ಕೂಡಿಸಲು |
“ಓಂ ನಮೊ ಭಗವತೆ ವಾಸುದೇವಾಯ” ಪ್ರ- |
ಸನ್ನ ದೇವನ್ನ ನೋಡಿ ಏಕಪಂಚಾಶ-|
ದ್ವರ್ಣ ಓಂದೊಂದರಲಿ ಹಂಚಿ ಹಾಕಿ |
ಹನ್ನೆರಡು ರಾಶಿಗಳ ಬರೆದು ಸ್ತುತಿಸಿ |
ಧನ್ಯನಾಗೆಲೊ ಮುಂದೆ ದಳದ ಸಂಧಿಗಳಲ್ಲಿ |
ರನ್ನ ತಾರಯೋಗ ಒಂಭತ್ತು ಪದದಂತೆ |
ಹನ್ನೆರಡು ರಾಶಿಗೆ ವಿಭಾಗ ಮಾಡಿ |
ಪನ್ನಗಶಾಯಿ ಸಿರಿ ವಿಜಯ ವಿಠ್ಠಲನ್ನ ಕಾ- |
ರುಣ್ಯವನು ಪಡೆದು ಚಿಂತಿಸು ಸುಹೃದಯದೊಳಗೆ ||೪||

ತ್ರಿವಿಡತಾಳ

ದ್ವಾದಶದಳವುಳ್ಳ ಕಮಲದ ಮೇಲೆ |
ದ್ವಿದ್ವಾದಶಪತ್ರದ ಕಮಲ ಬರೆದು |
ಸಾಧಿಸು ಓಂದೊಂದು ದಳದ ಮಧ್ಯದಲ್ಲಿ ವಿ- |
ನೋದ ಚತುರವಿಂಶತಿ ವರ್ಣಗಳ |
ವೇದ ಮಾತಾ ಮಂತ್ರ ಇದೆ ಎನ್ನು ಕೇಶವ |
ಮಾಧವಾದಿ ವರ್ಣ ಮೂರ್ತಿಗಳ |
ಪಾದವೇ ಸ್ಮರಿಸುತ್ತ ಮತ್ತೆ ಸೂರ್ಯನ ಗಮನ |
ಭೇದದಿಂದಲಿ ತಿಳಿ ನವವೀಥಿಯ |
ಐದಿಸು ಒಂದೊಂದು ಕಡೆ ಮೂರರ ಪ್ರಕಾರ |
ಆದಾವಿಲ್ಲಿಗೆ ತಾರೆ ಇಪ್ಪತ್ತೇಳು |
ಐದೇಳು ರಾಶಿಗಳು ಹಂಚಿ ಹಾಕಲಾಗಿ |
ಪಾದ ಪಾದಾರ್ಧ ತ್ರಿಪಾದವಹುದು |
ಪಾದತ್ರಿಮಂತ್ರ ತತ್ಸವಿತುಃ ವರೇಣ್ಯಂ ಭ- |
ರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾ- |
ಆದಿ ಮೂರುತಿ ನಮ್ಮ ವಿಜಯ ವಿಠ್ಠಲನ ಶ್ರೀ- |
ಪಾದವ ನೆರೆನಂಬು ಓಂ ಕಾರ ನುಡಿಯುತ್ತಾ ||೫||

ಅಟ್ಟತಾಳ

ಇದರ ಮೇಲೇ ಎಕ ಪಂಚಾಶದ್ದಳವುಳ್ಳ |
ಪದುಮವ ಬರೆದು ಪ್ರದಕ್ಷಿಣೆ ಮಾಡಿ |
ಮುದದಿಂದ ದ್ವಿರಷ್ಟ ಮಿಕ್ಕ ಮೂವತ್ತೈದು |
ಇದೆ ಇದೆ ದಳದೊಳು ಲಿಪಿಸಿ ಅಜಾದಿಯ |
ವೊದಗಿ ಸ್ತೋತ್ರವ ಮಾಡು ವರ್ಣದೇವತವೆಂದು |
ತುದಿ ಮೊದಲಿದರ ವಿಸ್ತಾರವೆ ಈ ಪರಿ |
ಇದೆ ಚಕ್ರಾಂಬುಜವೆಂದು ಕರೆಸುತಿಪ್ಪುದು |
ಹೃದಯಾಕಾಶ-ವಾರಿ-ಸ್ಥಂಡಿಲ-ಗಗನ-ಸೂರ್ಯ |
ವಿಧುಮಂಡಲ ಸಮಸ್ತ ಉತ್ತಮಸ್ಥಾನ |
ಇದೆ ನಿರ್ಮಾಣ ಮಾಡಿ ಸತ್ಕರ್ಮದಲಿ ನಿತ್ಯ |
ಪದೋಪದಿಗೆ ಶ್ರೀಹರಿಯ ಧ್ಯಾನ ಮಾಡಲಿಬೇಕು |
ಇದರೊಳು ಏಳುಕೋಟಿ ಮಂತ್ರಾರ್ಥವೆ ಉಂಟು |
ಆಧಿದೈವ ಆಧಿಭೂತ ಅಧ್ಯಾತ್ಮವೇ ಉಂಟು |
ಅಧಿಕಾರತನ ಭೇದ ತಿಳಕೊಂಬ ಜೀವಿಗಳಿಗೆ |
ಸದಮಲಾನಂದ ನಮ್ಮ ವಿಜಯ ವಿಠ್ಠಲರೇಯ |
ಬದಿಯಲ್ಲಿ ಇರುತಿಪ್ಪ ಚಕ್ರಾಬ್ಜ ಬಲ್ಲವನಿಗೆ ||೬||

ಆದಿತಾಳ

ಸ್ನಾನ ಉದಕ ಆಚಮನಿಯ ಸಂಧ್ಯಾರ್ಘ ತ್ರಿಪದ |
ಎಣಿಸುವಾಗ ನಾನಾ ಮಂತ್ರ ಜಪಿಸುವಾಗ |
ಮೇಣು ಅರ್ಚಾ ಅರ್ಚನೆ ಪಾವಕಾಹುತಿ ಯಜ್ಞ |
ಕ್ಷೋಣಿ ಸುರರ ಪೂಜೆ ಆತ್ಮ ಸಂತೋಷ ಅನ್ನ |
ಪಾನಾದಿ ಕೊಡುವಾಗ ಇದನೆ ಚಿಂತಿಸಬೇಕು |
ಏನೆಂಬೆನಯ್ಯ ಅವ ಅಪರೋಕ್ಷಿ ಎಂದಿಗೇ |
ಧ್ಯಾನಸಂಪೂರ್ಣ ಸಿದ್ಧ ಜ್ಞಾನವಂತನಾಹಾ |
ಪ್ರಾಣನಾಗಿ ಇಪ್ಪರು ಹರಿ-ಸಿರಿ-ಪ್ರಾಣಾದ್ಯರು |
ಕಾಣಿಸಿ ಕೊಂಬರು ಒಂದೊಂದು ಮಂಡಲದಲ್ಲಿ |
ಆನಂದ ಗತಿಗೆ ಸಾಧನ ಬೇಕಾದರೆ |
ಮಾನವಾ ಇದನೆ ಕೈಕೊಂಡು ಆಲೋಚಿಸು |
ಸ್ಥಾನಸ್ಥಾನಕೆ ನಿನಗೆ ಶುಭವಕ್ಕು ಪುಸಿ ಅಲ್ಲ |
ದೀನನಾಥನಾದ ವಿಜಯವಿಠ್ಠಲರೇಯನ್ನ |
ಗಾನವ ಮಾಡಿರೊ ಗ್ರಹಿಸಿ ಈ ಪರಿಯಿಂದ ||೭||

ಜತೆ

ಸಿದ್ಧ ಸಾಧನವಿದು ಬಿಂಬ ಕಾಣುವುದಕ್ಕೆ
ಪದ್ಮಿವಲ್ಲಭ ನಮ್ಮ ವಿಜಯವಿಠ್ಠಲ ಪ್ರಾಪ್ತಿ ||೮||