ನೈವೇದ್ಯ ಸುಳಾದಿ

ನೈವೇದ್ಯ ಸುಳಾದಿ

ಧ್ರುವತಾಳ

ಅನ್ನಾಭಿಮಾನಿ ಚಂದ್ರ ಅಲ್ಲಿ ಕೇಶವ ಪರ
ಮಾನ್ನದೊಳು ಭಾರತೀ ನಾರಾಯಣಾ
ಪೂರ್ಣ ಭಕ್ಷಗಳಲ್ಲಿ ಸೂರ್ಯ ಮಾಧವ ಘೃತಕೆ
ಕನ್ಯಾಲಕುಮಿ ಅಲ್ಲಿ ಗೋವಿಂದನೋ
ಬೆಣ್ಣೆಪಾಲಿನಲ್ಲಿ ಸರಸ್ವತಿ ವಿಷ್ಣು ಶಿರೋ
ರನ್ನ ಮಂಡಿಗಿಯಲ್ಲಿ ವಾಗೀಶ ಮಧುಸೂದನಾ
ಬೆಣ್ಣೆಯಲ್ಲಿ ವಾಯು ಅಲ್ಲಿ ತ್ರಿವಿಕ್ರಮಾ
ಘನ್ನ ದಧಿಯಲ್ಲಿ ಚಂದ್ರ ವರುಣ ವಾಮನ್ನ
ಚನ್ನಾ ಸೂಪಿನಲ್ಲಿ ಗರುಡ ಶ್ರೀಧರದೇವ
ಮುನ್ನೆ ಪತ್ರಾ ಶಾಖದಲ್ಲಿ ಮಿತ್ರನು ಹೃಷೀಕೇಶ
ಇನ್ನು ಫಲ ಶಾಖಗಳಲ್ಲಿ ಸರ್ಪ ಪದುಮನಾಭ
ಬಣ್ಣಿಪೆ ಆಮ್ಲದಲ್ಲಿ ಪಾರ್ವತಿ ದಾಮೋದರ
ಅನಾಮ್ಲಪತಿ ರುದ್ರಾ ಅಲ್ಲಿ ಸಂಕರುಷಣಾ
ಕಣ್ಣಿಗೆ ಇಂಪಾದ ಸಕ್ಕರಿಯಲ್ಲಿ ಸುರವ
ರೇಣ್ಯಾ ಇಂದ್ರಾನು ತದ್ಗತ ವಾಸುದೇವ
ಪನ್ನಗಶಾಯಿ ನಮ್ಮ ವಿಜಯವಿಠಲರೇಯನ ಪಾವನ್ನ
ಮೂರ್ತಿಯನೆನಿಸಿ ಪವಿತ್ರ ನೀನಾಗೋ || ೧ ||

ಮಟ್ಟತಾಳ

ಪರಿ ಪರಿ ಸೋಪಸ್ಕರದಲ್ಲಿಗೆ ಅಭಿಮಾನಿ
ಪರಮೇಷ್ಠಿಯನ್ನಿ ಆತಗೆ ಪ್ರದ್ಯುಮ್ನ
ತರುವಾಯ ಕಟುದ್ರವ್ಯಕ್ಕೆ ಯಮರಾಯ
ಇರುತಿಪ್ಪನು ಅಲ್ಲಿ ಅನಿರುದ್ಧ ಮೂರುತಿ
ಸರಕು ಸಂಭಾರಗಳು ಇಂಗು ಸಾಸಿವೆ ಏಳಾ
ಮರೀಚಿ ಜೀರಿಗೆ ಕರ್ಪುರ ಚಂದನ ಕೇ
ಸರ ಮೊದಲಾದ ಪರಿಪರಿ ವಿಧವಾದ
ಪರಿಮಳ ದ್ರವ್ಯಕ್ಕೆ ಮನುಮಥ ಅಧಿಪತಿ
ಪುರುಷೋತ್ತಮ ದೇವನು ವಾಸವಾಗಿಹನಯ್ಯ
ಪರೀಕ್ಷಿಸು ತೈಲ ಪಕ್ವಕೆ ಜಯಂತ
ವರ ಅಧೋಕ್ಷಜ ಮೂರುತಿ ಪೊಂದಿಕೊಂಡು ನಿತ್ಯ
ಮರಳೆ ಸಂಡಿಗೆಯಲ್ಲಿ ದಕ್ಷ ಪ್ರಜೇಶ್ವರ
ನರಹರಿ ಅಲ್ಲಿಪ್ಪ ಅದ್ಭುತ ಕಾರ್ಯಾನು
ಅರೆಮರೆ ಇಲ್ಲದೆ ಉದ್ದಿನ ಭಕ್ಷದಲ್ಲಿ
ಇರುತಿಪ್ಪನು ಮನು ಅಲ್ಲಿ ಅಚ್ಯುತ ಮೂರ್ತಿ
ಸುರುಚಿ ಲವಣದಲ್ಲಿ ನಿ‌ಋತಿಮತಿ ಜನಾರ್ದನ
ಸ್ಥಿರವೆನ್ನಿ ಲವಣ ಶಾಖಕ್ಕಭಿಮಾನಿ
ಮರೀಚಿ ಪ್ರಾಣನು ಅಲ್ಲಿ ಉಪೇಂದ್ರ ಭಗವಂತ
ಪರಮ ಶೋಭಿತ ತಾಂಬೂಲಕೆ ಗಂಗಾ
ಹರಿನಾಮಕ ದೇವ ಸ್ವಾದೋದಕದಲ್ಲಿ
ತರಣಿ ಸಮನ ಪುತ್ರ ಶ್ರೀಕೃಷ್ಣನು ಎನ್ನಿ
ಸುರರ ಮಸ್ತಕ ಮಣಿ ವಿಜಯವಿಠಲರೇಯಾ
ಸ್ಮರಿಸಿದ ಸುಜನಕೆ ತಿಳಿಪುವ ಇದರಂತೆ || ೨ ||

ತ್ರಿವಿದಿತಾಳ

ಪಾಕ ಶುದ್ಧಿಗೆ ಪುಷ್ಕರ ಹಂಸನಾಮಕ ದೇವ
ಬೇಕಾದ ಸ್ವಾದುರಸಗಳಿಗೆ ರತಿ ವಿಶ್ವಾ
ಕಾಕುಲಾತಿ ಸಲ್ಲವಲಿಗೆ ಪಾವಕ ಭೃಗು
ನೀ ಕೇಳು ಶುಷ್ಕ ಗೋಮಯ ಪಿಂಡಕ್ಕೆ ಈರ್ವರಾ
ವೋಕುಳಿನಾಮಕ ವಸಂತ ಋಷಭನು
ಪಾಕ ಕರ್ತಳು ಶ್ರೀದೇವಿ ವಿಶ್ವಂಭರ ವೇ
ದಿಕಾಮಂಟಪ ಸಹ ಭೂದೇವಿ ಸೂಕರಾ
ಆಕಾಶ ಭಾಗಕ್ಕೆ ಗಣಪತಿ ಕುಮಾರಾ
ಶ್ರೀಕಾಂತನೀತನೋ ಆ ವರ್ಣಕ್ಕಭಿಮಾನಿ
ಸಾಕಾರವಾಗಿದ್ದ ವಿಷ್ವಕ್ಸೇನ ಪುರುಷಲೋಕ
ಪವಿತ್ರ ತುಲಸಿಯಲ್ಲಿ ರಮಾ ಕಪಿಲಾ
ರಾಕೇಂದುವಿನಂತೆ ಪಾಕ ಪಾತ್ರಿಗೆ ಕೇಳು
ಕಾಕೋದರನ ರಾಣಿ ವಾರುಣಿ ಅನಂತಾ
ಲೋಕಾಂಬಿಕನಂತೆ ಪೊಳೆವ ಭೋಜನಪಾತ್ರಿಗೆ
ಲೋಕ ಜನನಿ ದುರ್ಗಾ ಹರಿರಾಣಿ ಸತ್ಯ
ಶೋಕ ಕಳೆವ ನಾನಾ ಮಾಟ ತಿದ್ದಿದ ಮಾ
ಣಿಕಮಯ ಬಟ್ಟಲಿಗೆ ಸೌಪರ್ಣ ದತ್ತಾನು
ಶ್ರೀಕಳತ್ರ ನಮ್ಮ ವಿಜಯವಿಠಲರೇಯ ವಿವೇಕವಂತರ
ಚಿತ್ತದಲಿ ಕೈಕೊಂಬನು || ೩ ||

ಅಟ್ಟತಾಳ

ಓದನ ಸರಸ್ವತಿ ಪರಮೇಷ್ಟಿಮಾಳ್ಪರು
ಶ್ರೀದೇವಿ ಚನ್ನಾಗಿ ಸೂಪಮಾಳ್ಪರು ಕೇಳಿ
ಆದಿ ಜಗದ್ಗುರು ಭಕ್ಷ ಮಾಳ್ಪನು ಸುರುಚಿ
ಯಾದ ಪರಮಾನ್ನ ಭಾರತಿ ಮಾಳ್ಪಳು
ಸ್ವಾದು ಶಾಖಾ ಫಲಾದಿಗಳು ಇಂದ್ರಾದಿ
ಚ್ಯಾದ್ಯರು ಮಾಡುವರು ಇಂತು
ಮಾಧವನ ಮುಂದೆ ನೈವೇದ್ಯ ಇಡಬೇ
ಕಾದ ಲಕ್ಷಣ ತಿಳಿ ತಾರತಮ್ಯದ ದಿಕ್ಕು
ಭೇದಗಳಿಂದಲಿ ಅಗ್ನಿ ಕೋಣೆಗೆ ಭಕ್ಷಾ
ಐದು ಮೊಳಿಯ ದಿಕ್ಕಿನಲ್ಲಿ ಪರಮಾನ್ನ
ವಾದಾವಿಲ್ಲದೆ ನೈ‌ಋತ್ತಿ ಕೋಣಿಲಿ ಲೇ
ಹಾದಿಗಳಿಡಬೇಕು ಭೂತ ವಾಯುವಿನಲ್ಲಿ
ಆದರಿಸಿ ವ್ಯಂಜನ ಪದಾರ್ಥಂಗಳು
ಮೋದದಲ್ಲಿ ಇಟ್ಟು ಇದರ ಮಧ್ಯದಲ್ಲಿ
ಓದನ ಪಾತ್ರಿಯ ಇಡಬೇಕು ಪರಮಾನ್ನ
ಓದನ್ನದೆಡೆಯಲ್ಲಿ ಘ್ರೃತ ಪಾತ್ರಿ ದಧಿ ಮೊದ
ಲಾದವು ಸ್ಥಾಪಿಸಿ ಬದಿಯಲ್ಲಿ ತಾಂಬೂಲ
ಸ್ವಾದಾದೋಕವಿಟ್ಟು ದೇವಂಗೆ ಕೈ ಮುಗಿದು
ವೇದ ಮಂತ್ರಗಳಿಂದ ತುತಿಸಿ ಕೊಂಡಾಡುತ್ತ
ಬೋಧಮೂರುತಿ ನಮ್ಮ ವಿಜಯವಿಠ್ಠಲರೇಯಾ
ಆದಿ ಪರಬೊಮ್ಮಾ ಆತ್ಮನಂದು ನೆನೆಸೋ || ೪ ||

ಆದಿತಾಳ

ಭೋಜನ ಪಾತ್ರಿ ಮಂಡಿಸಿ ಮೊದಲು ದಿವ್ಯಾನ್ನವಿ
ರಾಜಿಸುವೋ ಲವಣ ವ್ಯಂಜನಾದಿ ದ್ವಿತಿಯಲ್ಲಿ
ಮಾಜದೆ ಸಾರುವೆ ಇದರ ತರುವಾಯ
ತೇಜವಾಗಿದ್ದ ಭಕ್ಷ್ಯ ಸರ್ವವು ಇಡಬೇಕು
ಮೂಜಗತ್ಪತಿ ರಂಗ ಇನಿತು ಕೈಕೊಂಬನೆಂದು
ನೈಜ ಭಾವದಿಂದ ಚಿಂತಿಸಬೇಕು ನೋಡಿ
ಭೋಜ್ಯ ಭೋಜಕ ಭೋಕ್ತ ಭೋಗಾನು ಹರಿಯಂದು
ಪೂಜ್ಯ ಪೂಜ್ಯಕನೆಂದು ಅಂತರ ಮುಖನಾಗೋ
ಈ ಜಡ ದ್ರವ್ಯದಿಂದ ತೃಪ್ತಿಯಾಗುವದೆಂತೋ
ರಾಜೀವನೇತ್ರ ಕೃಷ್ಣ ಹೊರಗೆ ಒಳಗೆ ಇಪ್ಪ
ವ್ಯಾಜರಹಿತನಾಗಿ ಮಾಡಲೋ ಮಾಡೆಲೊ
ರಾಜ ಪದವಿ ಉಂಟು ಎಂದಿಗೂ ನಾಶವಿಲ್ಲ
ಬೀಜ ಮಾತು ಪೇಳುವೆ ಹಲವು ಹಂಬಲಸಲ್ಲ
ಮೂಜಗದೊಳಗಿದ್ದ ವರ್ಣಂಗಳು ಶುಭ್ರ
ರಾಜಸ ಭಾಗ ಮತ್ತೆ ಪೀತ ಕಷ್ಠಪದಾರ್ಥ
ರಾಜಿಸುತಿಪ್ಪ ನಾಲ್ಕು ಬಗೆ ದ್ರವ್ಯಾಭಿಮಾನಿ
ರಾಜೀವ ಪೀಠ ವಾಯು ಸರಸ್ವತಿ ಭಾರತಿ
ರಾಜಶೇಖರ ಮೊದಲಾದ ತತ್ತ್ವದಲಿದ್ದ
ಸುಜನರು ಕೇಳಿ ಶುಭ್ರಾದಿ ವರ್ಣಕ್ರಮಕೆ
ಪೂಜೆವಂತರು ಅಲ್ಲಿ ವಾಸುದೇವ ಸಂಕರುಷಣ
ರೈಜನಕ ಪ್ರದ್ಯುಮ್ನ ಅನಿರುದ್ಧಮೂರ್ತಿ ವಾಸ
ಆ ಜನ್ಮಾರಾಭ್ಯವಾಗಿ ಇದೆ ಮಾತ್ರ ತಿಳಿದು ಮಹಾ
ರಾಜಾದಿಲೋಕದಲ್ಲಿ ವಾಸವಾಗುವುದು
ರಾಜಾ ರಾಜಾಪ್ತ ಪ್ರೀಯ ವಿಜಯವಿಠಲ ಪರಮ
ಸೋಜಿಗನು ಕಾಣೋ ಸಾಲಕಾಮಂಧ ಹರಣ || ೫ ||

ಜತೆ

ಚಿಂತನೆ ಪ್ರಕಾರ ವಿನಿಯೋಗ ಮಾಡು ಶ್ರೀ
ಕಾಂತ ವಿಜಯವಿಠಲ ಕೃಷ್ಣಗೆ ಪದಾರ್ಥಗಳ || ೬ ||