Madhwacharyaru suladhi -by Purandara Dasaru

ಧ್ರುವತಾಳ
ಒಬ್ಬ ಆಚಾರ್ಯನು ದೈವವೇ ಇಲ್ಲವೆಂಬ |
ಒಬ್ಬ ಆಚಾರ್ಯನು ದೈವಕೆ ಎಂಟು ಗುಣವೆಂಬ |
ಒಬ್ಬ ಆಚಾರ್ಯನು ನಿರ್ಗುಣ ನಿರಾಕಾರ ನಿರೂಹನೆಂದು-
ತಾನೆ ದೈವವೆಂಬ |
ಇವರೊಬ್ಬರೂ ವೇದಾರ್ಥವರಿತೂ ಅರಿಯರು |
ಇವರೊಬ್ಬರೂ ಶಾಸ್ತ್ರಾರ್ಥವರಿತೂ ಅರಿಯರು |
ಒಬ್ಬ ಮಧ್ವಾಚಾರ್ಯರೆ ಪುರಂದರ ವಿಠಲನೊಬ್ಬನೆ
ಎಂದು ತೋರಿ ಕೊಟ್ಟವರಾಗಿ ||1||

ಮಟ್ಟ ತಾಳ
ಹರಿಪರ ದೇವತೆ ಎಂಬ ಜ್ಞಾನವೇ ಜ್ಞಾನ |
ಹರಿಯಡಿಗಳನೈದುವ ಮುಕುತಿಯೇ ಮುಕುತಿ |
ಹರಿ ವಿರಹಿತ ಜ್ಞಾನ ಮಿಥ್ಯಾ ಜ್ಞಾನ |
ಹರಿ ವಿರಹಿತ ಮುಕುತಿ ಮಾತಿನ ಮುಕುತಿ |
ಹರಿಪರ ಸಿರಿ ಮಧ್ವಾಚಾರ್ಯರೇ ಗುರುಗಳು |
ತ್ರೈಲೋಕ್ಯಕೆ ಪುರಂದರ ವಿಠಲನೇ ದೈವವು ||2||

ರೂಪಕತಾಳ
ಸುರತರುವಿರುತಿರೆ ಎಲವದಫಲ ಗಿಳಿ ಬಯಸಿಪ್ಪಂತೆ |
ಹಿರಯರಾದರು ನೋಡ ಹರಿಪರದೈವೆಂದರಿಯದೆ |
ಗುರುಗಳಾದರು ನೋಡ ಹರಿ ಪರದೈವೆಂದರಿಯದೆ |
ಸಿರಿವಿರಿಂಚಿ ಭವಾದಿಗಳೆಲ್ಲ ಹರಿಯ ಡಿಂಗರಿಗರೆಂದರಿಯದೆ |
ಹಿರಿಯರಾದರು ನೋಡು ಗುರುಗಳಾದರು ನೋಡ |
ಸಿರಿ ಪುರಂದರ ವಿಠಲನ ತೋರಿದ
ಸಿರಿ ಮಧ್ವಾಚಾರ್ಯರಿರುತಿರೆ
ಗುರುಗಳಾದರು ನೋಡ ||3||

ತ್ರಿವುಡೆ ತಾಳ
ಸೋಹಂ ಎಂದು ಲೋಕವ ಮೋಹಿಸುವರ |
ನಿರಾಕರಿಸಿ ದಾಸೋಹಂ ರಹಸ್ಯವನರುಹಿದ |
ಸೋಹಂ ಎಂಬ ಸಿರಿ ಪುರಂದರ ವಿಠಲ ನಾಳು |
ಮಧ್ವ ಮುನಿ ದಾಸೋಹಂ ಎಂಬ ||4||

ಆದಿತಾಳ
ವೈದಿಕ ಮತದಲಿ ನಡೆದೆವೆಂದು ತಾವು
ವೈಷ್ಣವವಂಬಿಟ್ಟು ಕೊಟ್ಟರು ಕೆಲವರು |
ವೈಷ್ಣವ ಮತದಲ್ಲಿ ನಡದೆವೆಂದು
ವೈದಿಕವಂ ಬಿಟ್ಟುಕೊಟ್ಟರು ಕೆಲವರು |
ವೈದಿಕ ವೈಷ್ಣವ ಒಂದೇ ಎಂದು ಮಧ್ವಮತ ಮುನಿ
ಪ್ರತಿಪಾದಿಸಿದ ಪುರಂದರ ವಿಠಲ ಮೆಚ್ಚ ||5||

ಝಂಪೆತಾಳ
ಏಕ ವಿಂಶತಿ ಕುಭಾಷ್ಯ ದೂಷಕನೆಂಬ
ಬಿರುದು ನಮ್ಮಯ ಗುರುರಾಯಗಲ್ಲದುಂಟೆ |
ಪುರಂದರವಿಠಲ ಸರ್ವೋತ್ತಮನೆಂಬ
ಸಿದ್ಧಾಂತವು ನಮ್ಮ ಗುರು ರಾಯರಗಲ್ಲದುಂಟೆ ? ||6||

ಅಟ್ಟತಾಳ
ಹರಿಯೆ ಪರಮ ಗುರು ಪರಮೇಷ್ಠಿ ಗುರು ಸುರ |
ಗುರಮಧ್ವಾಚಾರ್ಯ ಚಕ್ರವರ್ತಿ ಎಂ-
ದರಿತಿರೆ ಭಕುತಿ ಮುಕುತಿಯುಂಟು |
ಪುರಂದರ ವಿಠಲನೆ ದೈವಾಧಿ ದೈವ |
ಸುರ ಗುರು ಮಧ್ವಾಚಾರ್ಯರೆ ಚಕ್ರವರ್ತಿ ||7||

ಜತೆ
ಶರಣು ಗಿರಿ ಮಧ್ವಾಚಾರ್ಯರಿಗೆ ಪುರಂದರ ವಿಠಲಗೆ |
ಶರಣು ಶರಣೆಂಬೆ ನಾನನವರತ ||