ಭಕ್ತಾನಾಂ ಮಾನಸಾಂಭೋಜ…

‘ಭಕ್ತಾನಾಂ ಮಾನಸಾಂಭೋಜ…’

25-06-2014, ಶ್ರೀವಿಜಯೀಂದ್ರತೀರ್ಥರ 400ನೇ ವರ್ಷದ ಆರಾಧನೆ!

ಕುಂಭಕೋಣದ ಶ್ರೀವಿಜಯೀಂದ್ರತೀರ್ಥರ ಮಠದಲ್ಲಿ ಸಂಭ್ರಮದ ವಾತಾವರಣ. ಅಮೂಲ್ಯವಾದ ಈ ಶುಭ ಸಂಧರ್ಭದಲ್ಲಿ, ಭಕ್ತಿಯಿಂದ-ವೈಭವದಿಂದ ನಡೆದ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮಾಚರಣೆಯ ರೂವಾರಿಗಳು – ಪರಮಪೂಜ್ಯ 1008 ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದರು. ಈ ಎಲ್ಲಾ ಕಾರ್ಯಕ್ರಮದ ಕೇಂದ್ರ ಬಿಂದುವಾದದ್ದು ಮಾತ್ರ ಶ್ರೀಸುಬುಧೇಂದ್ರತೀರ್ಥರು ಆಚರಿಸಿದ ಅಕ್ಷರದ ಆರಾಧನೆ – ಅರ್ಥಾತ್ ನೂತನ ಗ್ರಂಥಗಳನ್ನು ಪ್ರಕಾಶಿಸಿ, ಬಿಡುಗೊಡಗೊಳಿಸಿದ್ದು. ಅವರು ಸಮರ್ಪಿಸಿದ ಗ್ರಂಥರಾಶಿಗಳಲ್ಲಿ, ನಮ್ಮ ಶ್ರೀಸುಶಮೀಂದ್ರ ಸೇವಾ ಪ್ರತಿಷ್ಠಾನ‘ಭಕ್ತಾನಾಂ ಮಾನಸಾಂಭೋಜ…’ ಎಂಬ ಸಂಪುಟವೂ ಒಂದು.

ದೈವಬಲದಿಂದ, ಗುರು-ಹಿರಿಯರ ಆಶೀರ್ವಾದದಿಂದ, ರಾಜಾ.ಎಸ್.ರಾಜಗೋಪಾಲಾಚಾರ್ಯರ ನೇತೃತ್ವದಲ್ಲಿ ಒಂದು ತಂಡದ ಪರಿಶ್ರಮದ ಪ್ರತಿಫಲರೂಪವಾಗಿ ಸಮರ್ಪಿತವಾದದ್ದೇ ‘ಭಕ್ತಾನಾಂ ಮಾನಸಾಂಭೋಜ…’. ಆಚಾರ್ಯರು ಮುನ್ನುಡಿದಂತೆ ನಾವು ಮಾಡ-ಹೊರಟಿದ್ದು ಸಂಪುಟ-1. ಕೆಲಸ ಆರಂಭವಾದಾಗ 800 ಪುಟಗಳ ಅಂದಾಜಿತ್ತು. ಸಮರ್ಪಿಸಿದಾಗ ಆದದ್ದು 1500 ಪುಟಗಳು! ಶ್ರೀವಿಜಯೀಂದ್ರ ತೀರ್ಥರ ಅನುಗ್ರಹ, ಎಲ್ಲಾ ಪಂಡಿತರ ಸಹಕಾರ, ರಾಜಗೋಪಾಲಾಚಾರ್ಯರ ಅದಮ್ಯ ಉತ್ಸಾಹ ಹಾಗೂ ಸಾಂಘಿಕ ಪ್ರಯತ್ನಕ್ಕೆ ದೊರೆತ ಫಲ ಇದಾಗಿತ್ತು.

ಆಚಾರ್ಯರ ನಿರ್ದೇಶನದಂತೆ 1500 ಪುಟಗಳ ಈ ಬೃಹತ್ ಸಂಪುಟವನ್ನು ವಿಂಗಡಿಸಿ ಸಂಪುಟ-1 ಮತ್ತು 2 ಎಂದು ಮಾಡಲಾಯಿತು. ಸಂಪುಟ-1 ರಲ್ಲಿ ಸಂಪೂರ್ಣವಾಗಿ ಶ್ರೀವಿಜಯೀಂದ್ರತೀರ್ಥರ ಗ್ರಂಥಗಳ ಬಗ್ಗೆ ವಿಶದವಾಗಿ ಮಂಡಿಸಲಾದ ಲೇಖನಗಳಿವೆ. ಸಂಪುಟ-2 ರಲ್ಲಿ ಶ್ರೀವಿಜಯೀಂದ್ರತೀರ್ಥರ ಇತರ ವಿಚಾರಗಳ ಬಗ್ಗೆ ಮಾಹಿತಿಯಿದೆ. ಹಿಂದಿನದೂ ಹಾಗೂ ಇಂದಿನದೂ (ನೂತನವಾಗಿ ರಚಿಸಲಾದ) ಸ್ತೋತ್ರಗಳೂ, ದಾಸರಪದಗಳೂ ಸೇರಿವೆ.

ನಿರ್ಧರಿಸಿದಂತೆ ಮುದ್ರಣಾಲಯದ ಮೆಟ್ಟಿಲನ್ನೂ ಮುಟ್ಟಿತ್ತು ಈ ಸಂಪುಟಗಳು. ಆದರೆ, ದುರಂತವೆಂಬಂತೆ ಈ ಸಂಪುಟಗಳ ರೂವಾರಿಗಳಾದ ರಾಜಾ.ಎಸ್.ರಾಜಗೋಪಾಲಾಚಾರ್ಯರನ್ನು, ದಿ|| ರಾಜಾ.ಎಸ್.ರಾಜ ಗೋಪಾಲಾಚಾರ್ಯರೆಂದೆ ಬರೆಯಬೇಕಾದ ದೌರ್ಭಾಗ್ಯ ನಮ್ಮದಾಯಿತು.

ಆದರೆ ಆಚಾರ್ಯರು ಕಂಡ ಕನಸು, ಅವರ ಅದಮ್ಯ ಚೈತನ್ಯದ ಬೆಳಕಿನಲ್ಲಿ ಮುನ್ನಡೆದು ಆ ಕನಸನ್ನು ನನಸಾಗಿಸಲು ನಡಿಗೆಯಿಟ್ಟಿದ್ದೇವೆ. ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದರಿಗೆ, ತನ್ಮೂಲಕ ಶ್ರೀವಿಜಯೀಂದ್ರ ತೀರ್ಥರಿಗೆ ಸಮರ್ಪಿಸಿದ್ದ ಈ ಸಣ್ಣ ಗ್ರಂಥ ಕುಸುಮದ ಮುದ್ರಣವನ್ನು ಪೂರ್ಣಮಾಡಿ, ಪುಸ್ತಕದ ರೂಪವನ್ನು ಕೊಟ್ಟಿದ್ದೇವೆ. ಹಿರಿಯರು, ಸಜ್ಜನರು ಆಸ್ವಾದಿಸಿ, ಅನುಗ್ರಹಿಸಬೇಕಾಗಿ ವಿನಂತಿಸುತ್ತೇವೆ. ಈ ಸಾಂಘಿಕ ಪ್ರಯತ್ನ ಶ್ರೀವಿಜಯೀಂದ್ರತೀರ್ಥರ ಅನುಗ್ರಹಕ್ಕೆ ಕಾರಣವಾಗಲಿ ಎಂದು ಪ್ರಾರ್ಥಿಸುತ್ತೇವೆ.

ಶ್ರೀವಿಜಯೀಂದ್ರತೀರ್ಥರ ಆರಾಧನಾ ಪ್ರಯುಕ್ತ ‘ಭಕ್ತಾನಾಂ ಮಾನಸಾಂಭೋಜ…’ ಪುಸ್ತಕವನ್ನು ರಿಯಾಯಿತಿ ದರದಲ್ಲಿ ಅಂದರೆ ಕೇವಲ 400ರೂಗಳಿಗೆ ನೀಡುತ್ತಿದ್ದೇವೆ. ಆಸಕ್ತರು ಸಂಪರ್ಕಿಸಬಹುದು.

Sri Sushameendra Seva Pratishtana
Ph: +91 99001 75717
Email :
sushameendra.pratishtana@gmail.com
sushameendraseva@gmail.com

 

Leave a Reply

Your email address will not be published. Required fields are marked *