ಬಾವಿಯ ನೀರನ್ನು ಸಿಹಿಯಾಗಿಸಿದ ಸುಶಮೀಂದ್ರರು

ಶ್ರೀಹರಿವಾಯುಗುರುಭ್ಯೋ ನಮಃ
ಶ್ರೀಸುಶಮೀಂದ್ರಯತೀಶ್ವರೋ ನ್ಯಾಸಮಣಿಃ ವಿಜಯಂ ದದ್ಯಾನ್ಮಮ

2001ರ ವರ್ಷದ ಏಪ್ರಿಲ್ ತಿಂಗಳದು. ಮಂತ್ರಾಲಯದಲ್ಲಿ ನೀರಿನ ಬಹಳ ತೀವ್ರವಾದ ಸಮಸ್ಯೆಯು ಪ್ರಾರಂಭವಾಗಿತ್ತು. ಮಠದಲ್ಲಿ ಹಿಂದೆ ಯಾವುದೋ ಕಾರಣಗಳಿಂದ ಮುಚ್ಚಲ್ಪಟ್ಟಿದ್ದ ಬಾವಿಯೊಂದನ್ನು ಪೂಜ್ಯ ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ಮತ್ತೆ ತೆಗೆಸುವ ಆಲೋಚನೆಯನ್ನು ಮಾಡಿದರು. ಆಗ ಮಠದ ಅನುಭವಿಗಳೊಂದಿಬ್ಬರು “ಆ ಬಾವಿಯನ್ನು ತೆಗೆಸುವುದು ಬೇಡ” ಎಂಬ ಸಲಹೆಯನ್ನಿತ್ತರು. ವಾಸ್ತು ದೋಷದಿಂದಾಗಿ ಅದನ್ನು ಮುಚ್ಚಲಾಗಿತ್ತು ಎಂದು ಅವರು ಕಾರಣವನ್ನಿತ್ತರು. ಆದರೆ ಶ್ರೀಗಳವರು “ಈ ನೀರಿನ ಸಮಸ್ಯೆಯು ಈ ವರ್ಷಕ್ಕೆ ಮಾತ್ರ ಬಂದಿಲ್ಲ. ಇನ್ನು ಮುಂದೆ ಪ್ರತೀವರ್ಷವೂ ಬಿಸಿಲು ಮತ್ತು ನೀರಿನ ಸಮಸ್ಯೆ ಎರಡೂ ಇಡೀ ಜಗತ್ತಿನಲ್ಲೇ ಹೆಚ್ಚುತ್ತವೆ. ನದಿಯಲ್ಲಿ ನೀರೇ ಇಲ್ಲದಿರುವಾಗ ಬಾವಿಯು ಕೂಡ ಇಲ್ಲದಿದ್ದರೆ ಕಷ್ಟವಾದೀತು. ವಾಸ್ತುದೋಷಕ್ಕೆ ಶಾಂತಿಯನ್ನು ಏರ್ಪಡಿಸಿ. ಆದರೆ ಬಾವಿಯನ್ನು ಮೊದಲು ತೆಗೆಸಿ” ಎಂದು ಅಪ್ಪಣೆ ಮಾಡಿದರು.

ಅವರ ಮಾತು ಶಾಪ ಮತ್ತು ಅನುಗ್ರಹ ಎರಡೂ ರೀತಿಯಲ್ಲಿ ವರ್ತಿಸಬಲ್ಲದು ಎಂಬ ಅರಿವಿದ್ದ ಅಧಿಕಾರಿಗಳು ಮುಚ್ಚಿದ್ದ ಬಾವಿಯನ್ನು ಎರಡೇ ದಿನಗಳಲ್ಲಿ ತೆಗೆಸಿದರು. ಸುಮಾರು 25 ಅಡಿಗಳಷ್ಟು ಶುದ್ಧವಾದ ನೀರು ಆ ಬಾವಿಯಲ್ಲಿ ಕೆಲವೇ ಗಂಟೆಗಳಲ್ಲಿ ತುಂಬಿಕೊಂಡಿತು. ಮುಂದೆ ಕೆಲ ದಿನಗಳಲ್ಲಿಯೇ ಶ್ರೀಗಳ ಅಪ್ಪಣೆಯಂತೆ ವಾಸ್ತು ಶಾಂತಿ ಹಾಗು ಕೂಪಶಾಂತಿಗಳೆರಡೂ ನಡೆದವು.

ಆರ್.ಓ ಫಿಲ್ಟರ್ ಮಾಡಲಾಗಿದೆಯೆಂಬಷ್ಟು ತಿಳಿಯಾದ ನೀರು ಅದು. ಉತ್ಪ್ರೇಕ್ಷೆಯಲ್ಲ. ಆದರೆ ಒಂದು ಕೊರತೆ  ಉಳಿಯಿತು. ನೀರು ಸಮೃದ್ಧವಾಗಿ ಇದ್ದರೂ ರುಚಿಯು ಸಪ್ಪೆಯಾಗಿಯೇ ಇತ್ತು. ಇನ್ನೊಂದು ಕೆಲ ದಿನಗಳಲ್ಲಿ ಬಾವಿಯ ನೀರು ಸಿಹಿಯಾದೀತು ಎನ್ನುತ್ತಲೇ ಸುಮಾರು ಒಂದು ತಿಂಗಳು ಸಂದಿತು. ಒಂದು ದಿನ ಸಂಜೆ “ವಾಕಿಂಗ್ ಮಾಡಲು ಹೋಗುವಾ” ಎಂದು ಶ್ರೀಗಳು ಹೇಳಿದರು. ಅವರ ಸಹಾಯಕ್ಕಾಗಿ ಅಂದು ನಾನು ಮತ್ತು ಯೋಗೀಶ(ಈಗ ಮೈಸೂರಿನ ಶಾಖಾಮಠದಲ್ಲಿದ್ದಾನೆ) ಇದ್ದೆವು. ವಾಕಿಂಗ್ ಮುಗಿಸಿ ಮಠದ ಒಳಗೆ ಬರುತ್ತಿರುವಾಗ ಬಾವಿಯಲ್ಲಿ ಇಣುಕಿ ನೋಡಿ “ಸಿಹಿ ಆಯಿತೇ ನೀರು?” ಎಂದು ಕೇಳಿದರು. ನಾನು ’ಇಲ್ಲ’ ಎಂದು ಉತ್ತರಿಸಿದೆ. ಶ್ರೀಗಳವರು ಸ್ವಗತದಲ್ಲಿಯೇ “ಮಾಡೋಣ ಮಾಡೋಣ ಒಂದು ಕಥೆ ಇದಕ್ಕೆ” ಎಂದು ಹೇಳುತ್ತಾ ಮುನ್ನಡೆದರು.

ಇದಾಗಿ ಎರಡನೆಯ ದಿನದಂದು ದ್ವಾದಶಿ ಇತ್ತು. ಬೆಳಿಗ್ಗೆ ಭಿಕ್ಷೆಯನ್ನು ಮುಗಿಸಿಕೊಂಡು ಬರುವಾಗ, ಅವರ ಕೋಣೆಯ ಹಿಂಬದಿಯಲ್ಲಿ ನಿಂತಿದ್ದ ಒಂದು ಲಾರಿಯು ಶ್ರೀಗಳವರ ಗಮನಕ್ಕೆ ಬಂದಿತು. “ಅದು ಯಾವ ಲಾರಿ?” ಎಂದು ಕೇಳಿ, ಉತ್ತರಕ್ಕೆ ಕಾಯದೆ ಶ್ರೀಗಳವರು ಮುನ್ನಡೆದರು. ಮಧ್ಯಾಹ್ನ ಸುಮಾರು 2ರ ಹೊತ್ತಿಗೆ ನಮ್ಮನ್ನು ತಾವಾಗಿಯೇ ಆ ಲಾರಿಯ ಬಳಿ ಹೋಗಿ ಕರೆದೊಯ್ದರು. ಆಗಲೇ ನಮಗೆ ತಿಳಿದದ್ದು ಅದು ಸೌದೆಯರಾಶಿಯನ್ನು ಹೊತ್ತು ತಂದಿರುವ ಲಾರಿ ಎಂದು. ಸೌದೆ ಅಂದರೆ ಒಡೆದು ಹಾಕಿದ ಸೌದೆಯಲ್ಲ. ಅದರಲ್ಲಿ ಇದ್ದದ್ದು ದೊಡ್ಡ ದೊಡ್ಡ ಕಟ್ಟಿಗೆಗಳು(logs). ಶ್ರೀಗಳವರು ಸಂಬಂಧಪಟ್ಟವರನ್ನು ಕರೆಸಿ ತಕ್ಷಣವೇ ಆ ಲಾರಿಯಲ್ಲಿರುವ ಕಟ್ಟಿಗೆಯರಾಶಿಯನ್ನು ಕೆಳಗೆ ಹಾಕಿಸಲು ಹೇಳಿ, ತಾವು ಅಲ್ಲಿಯೇ ಕುರ್ಚಿ ತರೆಸಿಕೊಂಡು ಕುಳಿತರು. ಲಾರಿಯಲ್ಲಿ ಅರ್ಧದಷ್ಟು ದಿಮ್ಮಿಗಳು ಖಾಲಿಯಾದಾಗ ಶ್ರೀಗಳವರು ನಮ್ಮನ್ನು (ನಾವು ಇದ್ದದ್ದು ಮೂವರು. ತಂಬಿ ರಾಘವೇಂದ್ರ, ನಾನು ಮತ್ತು ಯೋಗಿ) ಕರೆದು ಲಾರಿಯನ್ನು ಹತ್ತಿ ಉಳಿದಿರುವ ಕಟ್ಟಿಗೆಯ ಮೇಲ್ಪದರವನ್ನು ತೋರುತ್ತಾ “ಆ ಎರಡು ದಿಮ್ಮಿನ ಕೆಳಗೆ ತನ್ನಿ” ಎಂದು ಸೂಚಿಸಿದರು. ಯೋಗಿಯು ತಾನೊಬ್ಬನೇ ಹತ್ತಿ ಅವೆರಡನ್ನೂ ಕೆಳಗೆ ಬೀಳಿಸಿದ. ಶ್ರೀಗಳವರು “ತೊಗೊಂಡು ಬನ್ನಿ ಇಲ್ಲಿ” ಎಂದು ಹೇಳಿ ತಾವು ಮುನ್ನಡೆದರು. ನಾವು ಅವನ್ನು ಹೊತ್ತುಕೊಂಡು ಅವರನ್ನು ಹಿಂಬಾಲಿಸಿದೆವು. ಶ್ರೀಗಳವರು ಹೊರಟಿದ್ದು ಬಾವಿಯ ಕಡೆಗೆ. ಅಲ್ಲಿಗೆ ಹೋದ ನಂತರ ಮೂರು ನಾಲ್ಕು ಬಕೆಟ್ಟ್ ನೀರಿನಿಂದ ಆ ಮೋಟು ದಿಮ್ಮಿಗಳನ್ನು ತೊಳೆಯಿಸಿ ಅವುಗಳನ್ನು ಬಾವಿಯೊಳಗೆ ಹಾಕಿಸಿದರು. ಆಮೇಲೆ “ಸಿಹಿ ಆಗುತ್ತೆ ನೀರು ಇನ್ನೊಂದು ಮೂರು ದಿನಗಳಲ್ಲಿ” ಎಂದು ಸ್ಪಷ್ಟವಾಗಿ ಹೇಳಿದರು.

ಸಂಜೆ ಸ್ನಾನಕ್ಕೆ ಬಂದ ಅರ್ಚಕ ವರ್ಗದವರು ಈ ಕಟ್ಟಿಗೆಗಳನ್ನು ನೋಡಿ ಹೆಚ್ಚು ತಲೆ ಕೆಡಿಸಿಕೊಂಡಿದ್ದಿಲ್ಲ. ಆದರೆ ಮಾರನೆಯ ದಿನ ಆಡುಗೆಯವರು ನೋಡಿ ಬಾವಿಯಲ್ಲಿ ಕಟ್ಟಿಗೆಗಳು ಬಿದ್ದಿವೆ ಎಂದು ಸಂಬಂಧಪಟ್ಟವರಿಗೆ ದೂರು ಹೇಳಿದರು. ಅವುಗಳನ್ನು ತೆಗೆಸಬೇಕೆಂಬ ಪ್ರಯತ್ನಗಳು ಮೊದಲಾದವು. ಶ್ರೀಗಳವರು ತಾವಾಗಿಯೇ ಆ ಕಟ್ಟಿಗೆಗಳನ್ನು ಹಾಕಿಸಿದ್ದನ್ನು ನೋಡಿದ್ದ ರಕ್ಷಣಾವಿಭಾಗದ ಇಬ್ಬರು ಆ ವಿಷಯವನ್ನು ವ್ಯವಸ್ಥಾಪಕರ ಗಮನಕ್ಕೆ ತಂದರು. ನಂತರ ಅದು ಎಲ್ಲರಿಗೂ ಗೊತ್ತಾಗಿ ವಿಷಯವನ್ನು ಬೆಳೆಸದೆ ಸುಮ್ಮನಾದರು. ಆದರೆ ಎಲ್ಲರಿಗೂ ಕುತೂಹಲ. ಯಾಕೆ ಹಾಕಿಸಿದ್ದಾರೆ? ಎಂದು. ಇದಕ್ಕೆ ಉತ್ತರ ಸಿಕ್ಕಿದ್ದು ನಂತರದ ದಿನ. ಅಂದು ಆತ್ಮಕೂರು ಆನಂದತೀರ್ಥ ಆಚಾರ್ಯರು ಮಂತ್ರಾಲಯಕ್ಕೆ ಬಂದಿದ್ದರು. ಅವರು ಕೂಡ ಅಲಂಕಾರ ಶಾಲೆಯಲ್ಲಿ ಊಟಕ್ಕೆ ಕೂತಿದ್ದರು. ಊಟಕ್ಕೆ ಕುಳಿತ ಅರ್ಚಕರೆಲ್ಲರೂ ಈ ಕಟ್ಟಿಗೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಕೇಳುತ್ತಾ ಕೂತಿದ್ದ ಆನಂದತೀರ್ಥಾಚಾರ್ಯರು ” ಶ್ರೀಗಳವರು ಹಾಕಿಸಿರುವುದು ಉಸಿರಿಕಾಯಿ ಮದ್ದು. ಅದರಿಂದ ಸಪ್ಪಗಿದ್ದ ನೀರು ಕೂಡ ಸಿಹಿಯಾಗ್ತದ” ಎಂದು ನುಡಿದರು. ಉಸಿರಿಕಾಯಿ ಎಂದರೆ ಬೆಟ್ಟದ ನೆಲ್ಲಿಕಾಯಿ. ಕರ್ನೂಲು ಪ್ರಾಂತ್ಯದ ಕನ್ನಡದಲ್ಲಿ ಮದ್ದು ಎಂದರೆ ಮರದ ದಿಮ್ಮಿ ಎಂದರ್ಥ. ಈ ಸ್ವಾರಸ್ಯವನ್ನು ತಿಳಿದ ಎಲ್ಲರೂ ಅಂದು ಶ್ರೀಗಳವರ ಜ್ಞಾನದ ಬಗ್ಗೆ ಬಹಳ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಕೈತೊಳೆಯಲು ಹೋದ ಸಂದರ್ಭದಲ್ಲಿ ಎಲ್ಲರೂ ಇಣುಕಿ ನೋಡಿದ್ದೇ ನೋಡಿದ್ದು.

ವಿಶೇಷವೆಂದರೆ ಶ್ರೀಗಳವರು ಹೇಳಿದಂತೆಯೇ ಕೆಲವೇ ದಿನಗಳಲ್ಲಿ ಆ ಬಾವಿಯ ನೀರು ಸಿಹಿಯಾಗತೊಡಗಿತು ಕೂಡ. “ಬಾವಿಯ ನೀರನ್ನು ಸಿಹಿಯಾಗಿಸಿದರಂತೆ” ಎಂದು ’ಅಂತೆಗಳ’ ಮೂಲಕ ಈ ವಿಷಯವನ್ನು ಬಹಳ ಜನ ಕೇಳಿರಬಹುದು. ಇದು ಅಂತೆ ಕಂತೆ ಏನಲ್ಲ. ನಾನು ಪ್ರತ್ಯಕ್ಷವಾಗಿ ನೋಡಿದ ಘಟನೆ. ನೋಡಿದ ಅಲ್ಲ, ಅನುಭವಿಸಿದ ಘಟನೆ. ಗುರುಗಳ ಮಾತನ್ನು ಗುರುರಾಯರು ನಡೆಸುತ್ತಿದ್ದರು ಎಂಬುದಕ್ಕೆ ಉದಾಹರಣೆಯಲ್ಲವೇ?

ಆಧುನಿಕ ವಿಜ್ಞಾನವು ಇದರ ಬಗ್ಗೆ ಏನೇ ತಾರ್ಕಿಕ ಅಂಶವನ್ನು ಹೇಳಲಿ. ನನ್ನ ಮಟ್ಟಿಗೆ ಅಂತೂ ಇದು ಶ್ರೀಗಳವರಲ್ಲಿ ಹುದುಗಿದ್ದ ಪ್ರಾಚೀನ ವಿಜ್ಞಾನದ ಚಮತ್ಕಾರವೇ ಸರಿ. ನೆಲ್ಲಿಕಾಯಿ ಮರದ ಕಾಂಡಗಳನ್ನು ಹಾಕಿದರೆ ಬಾವಿಯ ನೀರು ಸಿಹಿಯಾಗುವುದು ಎಂಬ ವಿಷಯ ಬಾಯಿಂದ ಬಾಯಿಗೆ ಹರಡಿ ಅದು ಶ್ರೀಗಳವರಿಗೆ ಸಹ ತಿಳಿದಿತ್ತು ಎಂದುಕೊಳ್ಳುವಾ. ಆದರೆ

  • ಸಪ್ಪೆಯಾಗಿದ್ದ ನೀರನ್ನು ಸಿಹಿಯಾಗಿ ಮಾಡೋಣ ಎನ್ನುವ ದೃಢವಿಶ್ವಾಸ (Conviction)ಅವರಿಗೆ ಎಲ್ಲಿಂದ ಮೂಡಿತು?
  • ನಿಂತಿದ್ದ ಲಾರಿಯು ಕಟ್ಟಿಗೆಯದ್ದೇ ಎಂದು ಅವರಿಗೆ ಮೊದಲೇ ಹೇಗೆ ತಿಳಿಯಿತು?
  • ಅಷ್ಟೊಂದು ವಿಭಿನ್ನವಾದ ಕಟ್ಟಿಗೆಗಳ ರಾಶಿಯ ಮಧ್ಯ ನೆಲ್ಲಿಕಾಯಿಮರದ ಎರಡು ದಿಮ್ಮಿಗಳಿವೆ ಎಂದು ಅವರಿಗೆ ಮೊದಲೇ ಯಾರು ಹೇಳಿದ್ದರು?
  • ಆ ರಾಶಿಯ ಮಧ್ಯ ಅವರು ಆ ಎರಡು ಕಟ್ಟಿಗೆಗಳನ್ನೇ ಅಷ್ಟು ಕರಾರುವಾಕ್ಕಾಗಿ ಹೇಗೆ ಗುರುತಿಸಿದರು?

ಅವರ ಈ ಕೆಲಸಕ್ಕೆ ದೇವರು ಮತ್ತೊಬ್ಬ ವಿಜ್ಞಾನಿಯ ಮೂಲಕವೇ ಪ್ರಮಾಣವನ್ನು ಒದಗಿಸಿದ್ದು ಕೂಡ ಒಂದು ವಿಶೇಷ. ಮದ್ದು ಎಂದು ಆತ್ಮಕೂರು ಆಚಾರ್ಯರು ಹೇಳಿದ್ದರಲ್ಲೇ ಒಂದು ಸ್ವಾರಸ್ಯವುಂಟು. ಮದ್ದು ಎಂಬ ಶಬ್ದವನ್ನು ದಿಮ್ಮಿ ಎಂಬ ಅರ್ಥದಲ್ಲೂ, ಔಷಧದ ಉಪಚಾರ ಎಂಬ ಅರ್ಥದಲ್ಲೂ ಪರಿಗಣಿಸಬಹುದು. ಸಪ್ಪಗಿದ್ದ ನೀರಿನ ಸೆಲೆಗೆ ಶ್ರೀಗಳವರು ನೆಲ್ಲಿಕಾಯಿಯ ಔಷಧೋಪಚಾರ ಮಾಡಿ ಅದನ್ನು ಸಿಹಿಯಾಗಿಸಿದ್ದಾರೆ ಎಂದು ತಿಳಿಯಬಹುದಲ್ಲವೇ?

ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, ಬಿಸಿಲು ಹಾಗು ನೀರಿನ ಅಭಾವವನ್ನು ಕುರಿತು ಶ್ರೀಗಳವರು ಹೇಳಿದ ಮಾತು ಸಾರ್ವಕಾಲಿಕವಾಗಿ ಅನ್ವಯವಾಗುವಂತಹುದು. ಹೆಚ್ಚುತ್ತಲೇ ಹೋಗುತ್ತಿರುವ ಉಷ್ಣತೆ ಮತ್ತು ನೀರಿನ ಕೊರತೆ ಈ ಎರಡೂ ಸಮಸ್ಯೆಗಳು ಜಾಗತಿಕವಾದವುಗಳು. ಇದನ್ನು ಕುರಿತು ಅವರು ಅಂದೇ ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ತಕ್ಕ ಉಪಕ್ರಮಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ದೈವಕೃಪೆಯು ಕೂಡ ಬೇಕು ಎಂಬುದನ್ನು ಅವರು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.

ಮೌನಸಾಧಕರಿವರು ಸುಶಮೀಂದ್ರರು. ಅವಧೂತರ ಎಲ್ಲ ಲಕ್ಷಣಗಳು ಅವರಲ್ಲಿದ್ದವು. ಅಮಾಯಕನಂತೆ ಕಾಣುತ್ತಿದ್ದರೂ ಕೂಡ ಒಳಗೆ ಜ್ಞಾನವು ಜ್ವಲಿಸುತ್ತಲೇ ಇತ್ತು. ಲೌಕಿಕಾರ್ಥದ ಅಮಾಯಕರಾಗಿದ್ದಲ್ಲಿ ಈ ವೈಜ್ಞಾನಿಕ ಉಪಚಾರದ ಅರಿವಾದರೂ ಎಲ್ಲಿ ಇರುತ್ತಿತ್ತು? ಎಲ್ಲ ತಿಳಿದಿದ್ದೂ ಹಾರಾಡದೇ ಮಗುವಿನಂತೆ ಇದ್ದುಬಿಡುವುದು ಸಾಧಕರ ಲಕ್ಷಣ. ನಮ್ಮ ಅಜ್ಜಯ್ಯನು ಇದೇ ಸಾಲಿನ ಸಾಧಕರು.

ಅಂದ ಹಾಗೆ ಈ ಬಾವಿಯು ಇನ್ನೂ ನೀರಿನಿಂದ ಸಮೃದ್ಧವಾಗಿಯೇ ಇದೆ. ಮಂತ್ರಾಲಯಕ್ಕೆ ಹೋದಾಗ ನೋಡಬಹುದು. ಆದರೆ ದೂರದಿಂದಲೇ ನೋಡಿ. ಹತ್ತಿರ ಹೋಗಿ ಅಶುಚಿಯನ್ನು ಮಾಡದಿರಿ. ಇದು ಬರಿಯ ನೀರಲ್ಲ. ಶ್ರೀಹರಿವಾಯುಗುರುಗಳು ತಮ್ಮ ಮಹಿಮೆಯನ್ನು ತೋರಿದ ಪುಣ್ಯತೀರ್ಥವಿದು.

Article by Raghunandana Sharma
Courtesy : http://eeshavasyam.com

Leave a Reply

Your email address will not be published. Required fields are marked *