ಶ್ರೀರಾಘವೇಂದ್ರವಿಜಯದ ಕಣ್ಣಲ್ಲಿ ಶ್ರೀರಾಯರ ಅವತಾರ

ದಿನಕರನುದಿಸಿದನು…. ಧರೆಯೊಳಗೆ….

ಶ್ರೀರಾಘವೇಂದ್ರವಿಜಯದ ಕಣ್ಣಲ್ಲಿ ಶ್ರೀರಾಯರ ಅವತಾರ

ಗುರುಸಾರ್ವಭೌಮರ ವರ್ಧಂತೀ ಮಹೋತ್ಸವ – ಶ್ರೀರಾಯರು ಭೂಲೋಕದಲ್ಲಿ ಅವತರಿಸಿದ ಪುಣ್ಯಪ್ರದ ದಿವಸ. ಇತಿಹಾಸದುದ್ದಕ್ಕೂ ತಮ್ಮ ಪರಾಕ್ರಮ,ಅನೇಕಕಲಾಪ್ರಾವೀಣ್ಯದಿಂದ, ಪಾಂಡಿತ್ಯಾದಿ ಸದ್ಗುಣಗಳಿಂದ ಜಗದ್ವಿಖ್ಯಾತವಾದ ಮನೆತನದಲ್ಲಿ ಸಕ್ಷಾತ್ ಪ್ರಹ್ಲಾದರಾಜರೇ ಅವತರಿಸಿದ ಪರಮಮಂಗಲಕರ ದಿನ.

ಶ್ರೀರಾಘವೇಂದ್ರಗುರುಸಾರ್ವಭೌಮರ ದಿವ್ಯವಾದ ಚರಿತ್ರೆಯನ್ನು ತಿಳಿಸುವ ಮಹೋಪಕಾರವನ್ನು ಮಾಡಿದ ನಾರಾಯಣಾಚಾರ್ಯರ ಆಪ್ತತ್ವ, ಈ ಗ್ರಂಥದ ಪ್ರಸ್ತುತಿಯ ಹಿನ್ನೆಲೆ, ಆ ಗ್ರಂಥದಲ್ಲಿ ಪ್ರತಿಪಾದಿತವಾಗಿರುವ ಮಧ್ವವಿಜಯದ ಪ್ರತಿಬಿಂಬತ್ವ ಇವೆಲ್ಲವೂ ಶ್ರೀರಾಘವೇಂದ್ರವಿಜಯದ ಪರಮಪ್ರಾಮಾಣಿಕತ್ವವನ್ನು, ಶ್ರೆಷ್ಠತ್ವವನ್ನು ತಿಳಿಸುವ ಪ್ರಮುಖ ವಿಚಾರಗಳು.

ಶ್ರೀರಾಘವೇಂದ್ರಗುರುರಾಜರೇ ಇದನ್ನು ಪರಿಶೀಲಿಸಿ ಪ್ರಮಾಣೀಕರಿಸಿರುವದರಿಂದ ಇದರ ಮೌಲ್ಯ ಎಷ್ಟು ಎಂಬುದು ಊಹೆಗೂ ನಿಲುಕದ್ದು. ಅಂತಹ ಪರಮ ಶ್ರೇಷ್ಠ ಮಹಾಕಾವ್ಯ ಶ್ರೀರಾಘವೇಂದ್ರವಿಜಯ.

ಶ್ರೀರಾಘವೇಂದ್ರವಿಜಯದಲ್ಲಿ ರಾಯರ ಅವತಾರದ ಪ್ರಸ್ತುತಿಯು ತೃತೀಯಸರ್ಗದಲ್ಲಿ ಅವರ ಶ್ರೇಷ್ಠವಂಶದ ಹಿನ್ನೆಲೆ,ಶ್ರೀತಿಮ್ಮಣ್ಣಾರ್ಯರ ಹಾಗೂ ಅವರ ಪೂರ್ವೀಕರ ಶ್ರೇಷ್ಠ ತಪಸ್ಸು, ವಿದ್ಯಾದಿ ವೈಭವಗಳ ಅವರ ಚರಿತ್ರೆಯ ಸಂಕ್ಷಿಪ್ತ ಪರಿಚಯವನ್ನು, ಶ್ರೀರಾಯರ ಅವತಾರ ವೃತ್ತಾಂತವನ್ನು ಶ್ರೀರಾಘವೇಂದ್ರವಿಜಯಕಾರರು ವಿವರಿಸಿದ್ದಾರೆ.

ಗೌತಮರ ಮಹಿಮಾತಿಶಯಗಳು :

ಸರ್ವೋತ್ತಮದೇವತೆಯಾದ ನಾರಾಯಣನಲ್ಲಿ ವಿಶೇಷವಾದ ಭಕ್ತಿಜ್ಞಾನಾದಿಗಳನ್ನೇ ಪ್ರಧಾನವಾಗಿ ಉಳ್ಳ, ಸುದ್ಗಿಣಗಳಿಗೇ ಆಶ್ರಯಭೂತರಾಗಿದ್ದ ಋಷಿಗಳ ಸಮೂಹದಲ್ಲಿ ಪ್ರಧಾನರಾದ ಗೌತಮನಾಮ ಮುನಿಗಳು ಭೂಲೋಕದಲ್ಲಿದ್ದರು. ಇವರು ಅನುಗ್ರಾಹಕತ್ವ ಮೊದಲಾದ ಗುಣಗಳಿಗೆ ಪ್ರಸಿದ್ಧರು. ಅಸುರಮೋಹನಾರ್ಥವಾಗಿ ನ್ಯಾಯಸೂತ್ರವೆಂಬ ತರ್ಕಶಾಸ್ತ್ರವನ್ನು ಮಾಡಿ ಸಜ್ಜನರ ಉದ್ಧಾರವನ್ನು ಮಾಡಿದವರು ಹಾಗೂ ಶ್ರೀವೇದವ್ಯಾಸದೇವರ ಅವತಾರಕ್ಕೆ ಕಾರಣರಾದವರು. ಹೀಗೆ ತಪಸ್ಸು, ಅವರ ಮಹಿಮೆಯ ವರ್ಣನೆಗಳೊಂದಿಗೆ ಶ್ರೀರಾಯರ ಉತ್ಪತ್ತಿವಿಚಾರವು ಈ ಮಹಾಕಾವ್ಯದಲ್ಲಿ ತಿಳಿಸಲ್ಪಟ್ಟಿದೆ.

ಗೌತಮವಂಶದ ವರ್ಣನೆ:

ಈ ರೀತಿ ಗೌತಮರಂತೆಯೇ ಶ್ರೇಷ್ಠ ಸದ್ಗುಣಗಳೇ ತುಂಬಿದ ಶ್ರೇಷ್ಠರು ಅವತರಿಸಿದ ಶ್ರೇಷ್ಠವಂಶ ಗೌತಮರ ವಂಶ. ಈ ವಂಶದಲ್ಲಿನ ಬಹುಜನರು ಮೋಕ್ಷವೆಂಬ ಶ್ರೇಷ್ಠ ಫಲವನ್ನೇ ಪಡೆದವರು. ಒಳ್ಳೆಯ ನಡತೆ ಉಳ್ಳವರು, ಅಳಿಯಿಲಿಕ್ಕಸಾಧ್ಯವಾದ ಎತ್ತರದ ವ್ಯಕ್ತಿತ್ವ ಉಳ್ಳ ಬ್ರಾಹ್ಮಣ ಶ್ರೇಷ್ಠರು ಈ ಗೌತಮವಂಶದಲ್ಲಿ ಅವತರಿಸಿದ್ದರು.

ಇಂತಹ ಅನೇಕ ಗೌತಮ ವಂಶಗಳಲ್ಲಿ ಶ್ರೇಷ್ಠವಾದ ವಂಶವೊಂದಿತ್ತು.
“ಜನಕೋಮಪಕನ್ಯಕೇsನ್ವಯೇಸ್ಮಿನ್” ತಂದೆಯ ಹೋಲಿಕೆಯಿಳ್ಳ ಹೆಣ್ಣುಮಕ್ಕಳುಳ್ಳ, “ಅನುಜಾತಸಮಾನಪೂರ್ವಕಾತೇ” ಸದ್ಗುಣಗಳ ವಿಚಾರದಲ್ಲಿ ತಮ್ಮಂದಿರೆಲ್ಲ ಅಣ್ಣಂದಿರ ಸಮಾನವಾಗಿರುವ, “ನಿಜತಾತಾಧಿಕನಂದನಃ” ಸದ್ಗುಣಗಳು, ವಿದ್ಯಾಪ್ರಭಾವ ಮುಂತಾದ ವಿಷಯಗಳಲ್ಲಿ ತಂದೆಯನ್ನೂ ಮೀರಿಸುವ ಪುತ್ರರತ್ನರು ಹುಟ್ಟುತ್ತಿದ್ದ ಆ ಹಿರಿದಾದ ವಂಶದಲ್ಲಿ ಶ್ರೀಕೃಷ್ಣಾಚಾರ್ಯರೆಂಬ ಶ್ರೇಷ್ಠರು ಇದ್ದರು.

ಪೂರ್ವಿಕರ ಮಹಿಮೆ:

ಶ್ರೀಕೃಷ್ಣಾರ್ಯರು ವಂಶಪಾರಂಪರ್ಯವಾಗಿ ಬಂದ ಶ್ರೇಷ್ಠವಾದ ಬ್ರಾಹ್ಮಣವಿದ್ಯೆಯೊಂದಿಗೆ, ಬ್ರಾಹ್ಮಣಯೋಗ್ಯವಾದ ಅನೇಕರೀತಿಯ ವಿದ್ಯೆಗಳನ್ನು ಧರಿಸಿದವರಾಗಿದ್ದರು. ಸದ್ಭುತ ವೀಣಾವಾದನವನ್ನೂ ಗಳಿಸಿಕೊಂಡಿದ್ದರು. ಅಂತಹ ಕೃಷ್ಣಾರ್ಯರು “ಕೃಷ್ಣಭೂಬಲಾರೇಃ ನಿಜಗಾಂಧರ್ವಕಲಾಂ ಉಪದಿಶ್ಯ…” ಅಖಿಲ ಕರ್ಣಾಟಕ ರತ್ನಸಿಂಹಾಸನಾಧೀಶ್ವರನಾದ ಶ್ರೀಕೃಷ್ಣದೇವರಾಯನಿಗೆ ನಿಜಗಂಧರ್ವವಿದ್ಯೆಯನ್ನು ಉಪದೇಶಿಸಿದವರು. ಗುಣವಾರಿಧಿಗಳಾದ ಶ್ರೀಕೃಷ್ಣಾರ್ಯರಿಗೆ ಸುವರ್ಣಮಯವಾದ ಮೇರುಪರ್ವತದಂತಿರುವ ಕನಕಾಚಲಾರ್ಯರೆಂಬ ಪುತ್ರರು ಹುಟ್ಟಿದರು.

ತಂದೆಗಳಾದ ತಿಮ್ಮಣ್ಣಾರ್ಯರ ಮಹಿಮೆ:
ಅಂತಹ ದ್ವಿಜಶ್ರೇಷ್ಠರಾದ ಕನಕಾಚಲಾರ್ಯರಿಗೆ, “ಆಗಮಮೌಲಿತಂತ್ರಭಾಜಾಂ ಆದಿಭೂಃ” – ವೇದಾಂತವಿದ್ಯೆಯನ್ನು ಚೆನ್ನಾಗಿ ಬಲ್ಲವರಾದ, ಆ ವೇಂಕಟಶೈಲನಾಥನನ್ನೇ ತಮ್ಮ ನಾಥನನ್ನಾಗಿ ಉಳ್ಳ ತಿಮ್ಮಣ್ಣಾರ್ಯರೆಂಬ ಜ್ಞಾನಿಗಳು ಪುತ್ರರಾಗಿ ಜನಿಸಿದರು. ತಿಮ್ಮಣ್ಣಾರ್ಯರೂ ತಂದೆಯಂತೆಯೇ, ಪೂರ್ವಿಕರಂತೆಯೇ ಬಲ್ಯದಲ್ಲಿಯೇ ವ್ಯಾಕರಣಾದಿ ಶಾಸ್ತ್ರಗಳನ್ನು ಚೆನ್ನಾಗಿ ಅಭ್ಯಸಿಸಿದರಲ್ಲದೇ, ವಂಶಪರಂಪರಾಪ್ರಾಪ್ತವಾಗಿ ಬಂದಿದ್ದ ವೀಣಾವಿದ್ಯೆಯನ್ನೂ, ಅಪ್ರತಿಮ ಸಂಗೀತವಿದ್ಯೆಯನ್ನೂ ಅಭ್ಯಾಸ ಮಾಡಿ, ವಿಜಯನಗರದಲ್ಲಿಯೇ ಶೋಭಿಸುತ್ತಿದ್ದರು. ತಿಮ್ಮಣ್ಣಾರ್ಯರಿಗೆ ಸರಿಯಾದ ವಯಸ್ಸಿಗೆ ಅನುರೂಪಳಾದ ಗೋಪಿಕಾಂಬಾ ಎಂಬ ಶ್ರೇಷ್ಠ ಕನ್ಯೆಯೊಂದಿಗೆ ವಿವಾಹವಾಯಿತು.

ತಂದೆಗಳಾದ ತಿಮ್ಮಣ್ಣಾರ್ಯರ ವೈಭವ:

ವಿಜಯನಗರದ ರಾಜಸಭೆಗಳಲ್ಲಿ ಸಕಲ ವಿದ್ಯೆಗಳಲ್ಲೂ ತಮ್ಮ ವಿಲಕ್ಷಣವಾದ ಪಾಂಡಿತ್ಯದಿಂದ ಅಸಾಧಾರಣ ಬುರುದಾವಲಿಗಳನ್ನು ಸಂಪಾದಿಸಿದ್ದರು. ಆಸ್ಥಾನಕ್ಕೆ ಬರುತ್ತಿದ್ದ ಮಹಾ ವಿದ್ವಾಂಸರನ್ನು ವಾಕ್ಯಾರ್ಥಗಳಲ್ಲಿ ಗೆದ್ದು ಮಹಾರಾಜರಿಂದಲೇ “ಹಗಲು ದೀವಟಿಗೆಯ” ಮರ್ಯಾದೆಯನ್ನು ಪಡೆದವರಾಗಿದ್ದರು. ಈ ರೀತಿ ವೈಭವದಿಂದ ಶ್ರೇಷ್ಠ ಪತಿವ್ರತೆಯಾದ ಪತ್ನಿಯುತರಾದ ಶ್ರೀತಿಮ್ಮಣ್ಣಾರ್ಯರು ವಿಶೋಭಿಸಿದರು.

ಪುತ್ರೋತ್ಸವ:

ನಂತರದಲ್ಲಿ ಕಠಿಣವ್ರತಾದಿಗಳನ್ನು ಆಚರಿಸಿ ಶ್ರೀವೇಂಕಟೇಶ್ವರನನ್ನು ಪರಿವಾರಸಹಿತರಾಗಿ ಸೇವಿಸಿ, ಕಾವೇರಿ ಪಟ್ಟಣಕ್ಕೆ ಬಂದಿ ಯೋಗ್ಯರೀತಿಯಲ್ಲಿ ವಾಸವಾಗಿದ್ದಾಗ ಪುತ್ರೋತ್ಸವವಾಗಿ ಸುಗುಣಶೀಲಸಂಪನ್ನಳಾದ, ಸುಂದರಿಯಾದ “ವೇಂಕಟಾಂಬಾ” ಎಂಬ ಪುತ್ರಿಯನ್ನೂ, ಗುಣಶಾಲಿಯಾದ, ಕೀರ್ತಿಸಂಪನ್ನನಾದ “ಗುರುರಾಜ” ಎಂಬ ಮಗನನ್ನೂ ಪಡೆದರು.

ಒಬ್ಬ ಗಂಡುಮಗನನ್ನ ಪಡೆದಾಗ್ಯೂ ಮತ್ತೊಬ್ಬ ಗಂಡುಮಗನನ್ನು ಪಡೆಯುವ ಇಚ್ಛೆಯು ದಂಪತಿಗಳಿಗೆ ಉಂಟಾಗಿ ಕುಲಸ್ವಾಮಿಯಾದ ಶ್ರೀನಿವಾಸನನ್ನೇ ವ್ರತಾದಿಗಳಲ್ಲಿ ನಿಷ್ಠರಾದ ತಿಮ್ಮಣ್ಣಾರ್ಯರು ಪ್ರಾರ್ಥಿಸಿದರು. ಶ್ರೀನಿವಾಸನ ಪರಮಾನುಗ್ರಹದಿಂದ ಗೋಪಿಕಾಂಬೆಯು ಪ್ರಾರ್ಥನೆಯ ಫಲವಾಗಿ ಗರ್ಭವನ್ನು ಧರಿಸಿದಳು.

ವಿಲಕ್ಷಣವಾಗಿ ಶೋಭಿಸಿದ ಗರ್ಭವತೀ:

ಆ ಗರ್ಭಿಣಿಯ ತೇಜಸ್ಸನ್ನು ನೋಡಿ ಜನರೆಲ್ಲ ಆಶ್ಚರ್ಯದಿಂದ ಶ್ರೀತಿಮ್ಮಣ್ಣಾರ್ಯರ ಪುಣ್ಯಭರಿತವಾದ ಕೀರ್ತಿತೇ ಸಾಕಾರವಾಗಿ ಈ ರೂಪದಲ್ಲಿದೆಯೇ ? ಎಂದು ಉದ್ಗರಿಸಿದರಂತೆ. ಗರ್ಭದಲ್ಲಿರುವ ತಾಪಸಶ್ರೇಷ್ಠನ ಪ್ರಭಾವದಿಂದ ಗೋಪಿಕಾಂಬೆಯು ಶ್ರೇಷ್ಠ ಬಿಳಿಯ ಬಣ್ಣದಿಂದ ವಿಶೋಭಿಸುತ್ತಿದ್ದರಂತೆ. ಇತರ ಗರ್ಭವತಿಯರಲ್ಲಿ ಸಹಜವಾಗಿದ್ದ ಪ್ರೀತಿಕರ ಆಹಾರ ಪದರ್ಥಗಳಲ್ಲಿನ ರತಿಯು ಗೋಪಿಕಾಂಬೆಯಲ್ಲಿ ಕಂಡುಬರಲೇ ಇಲ್ಲ. ಹೊಟ್ಟೆಯಲ್ಲಿನ ಪರಮವೈರಾಗ್ಯಮೂರ್ತಿಯ ಪ್ರಭಾವ ಎಂಬಂತೆ ಆಹಾರ ಪದಾರ್ಥಗಳ ಮೇಲೆ ಗೋಪಿಕಾಂಬೆಗೂ ವೈರಾಗ್ಯ ಹುಟ್ಟಿತ್ತು. ನಿಷ್ಕಲಂಕಚರಿತನಾಗುವ ಮಗುವಿನ ಸೂಚನೆ ಎಂಬಂತೆ ಗೋಪಿಕಾಂಬೆಯ ಮುಖವು ನಿಷ್ಕಲಂಕವಾಯಿ ಶೋಭಿಸುತ್ತಿತ್ತು.

ಹೀಗೆಯೇ ದಿನಕಳೆದಂತೆ ” ಈ ಜಗತ್ತು ಸತ್ಯವೋ ಮಥ್ಯೆಯೋ ಎಂಬ ಸಂಶಯವು ಇಲ್ಲದಂತೆ ಕಣ್ಣಿಗೆ ದೃಷ್ಟವಾದದ್ದು ಜ್ಞಾನವಿಷಕವಾದದ್ದು ಎಂಬ ಅನುಮಾನ ಪ್ರಯೋಗದಂತೆ, ದೃಷ್ಯಭಾವಾತ್ ಎಂಬ ಹೇತುವಿಗೆ ಅದೃಶ್ಯತ್ವ ದೋಷ ಪರಿಹರಿಸಿ, ವಿಶ್ವವು ಸತ್ಯವೇ ಆಗಿದೆ” ಎಂಬ ಪ್ರಮೇಯ ತಿಳಿಸುವಂತೆ ಗೋಪಿಕಾಂಬೆಯ ಗರ್ಭವು ಬೇಳೆದು, ಅವರ. ಕಟಿಪ್ರದೇಶವು ಸ್ವಭಾವಕ್ಕನುಗುಣವಾಗಿ ವಿಶಾಲವಾಯಿತು ಎಂದು ರಾಯರ ಗರ್ಭವಾಸಾವಸ್ಥೆಯಿಂದಲೇ ಮಧ್ವಸಿದ್ಧಾಂತದ ಪ್ರಮೇಯಗಳ ಚಿಂತನೆಯನ್ನು ಶ್ರೀರಾಘವೇಂದ್ರವಿಜಯಕಾರರು ಮಾಡಿಸಿದ್ದಾರೆ.

ಹೊಟ್ಟೆಯಲ್ಲಿನ ಕೂಸು ಮುಂದೆ ಕಾಷಾಯವಸ್ತ್ರಧರಿಸಲಿದೆ ಎಂಬ ಅರಿವು ಇದ್ದಂತೆಯೋ ಏನೋ, ಆ ಕಾಷಾಯಬಣ್ಣದ ಸಂಬಂಧ ಮಗುವಿಗೆ ಆಗಲಿದ ಎಂಬುದರ ಸೂಚನೆಯಂತೆ ಗರ್ಭವತೀಯಾಗಿದ್ದ ಗೋಪಿಕಾಂಬಾ ಮೃದುವಾದ ಮಣ್ಣನ್ನು ತಿಂದರಂತೆ.

ನಿರ್ಮಲ ಮನಸ್ಸುಳ್ಳ ಗೋಪಿಕಾಂಬೆ, ಕಾಯಿಸಿದ ಬಿಸಿನೀರಿನ ಬದಲು, ತಪೋನಿಷ್ಠನಾದ ಗರ್ಭಸ್ಥ ಮಗುವಿನ ಸೂಚನೆಯೋ ಎಂಬಂತೆ ಮಂಜುಗಡ್ಡೆಯಂತೆ ತಂಪಾಗಿರುವ ನದಿನೀರನ್ನೇ ಬಯಸಿದರಂತೆ.

ಗರ್ಭಸ್ಥ ಶಿಶುವು “ಕರ್ಮಂದಿಗಳರಸ” “ಗುರುಸಾರ್ವಭೌಮ” “ದೇಶಿಕರೊಡೆಯ” “”ಉತ್ತಮಹಂಸ” ಎಂದು ಹಲವುರೀತಿಯಿಂದ ಗೇಗೀಯಮಾನನಾಗುವವನಿದ್ದಾನೆ ಎಂಬುದುದ ಸೂಚನೆಯಂತೆ, ಮನೆಯಲ್ಲಿನ ಉತ್ಕೃಷ್ಟಪದಾರ್ಥಗಳಾವೂ ಬಯಸದೇ, “ಪರಕೀಯ ಗೃಹಾತ್ ಉಪಾಹೃತಂ ರುಚಿರಂ ವಾ ಅರುಚಿ ವಾ ಅಪಿ ಅಭುಂಕ್ತ” ಬೇರೆಯವರ ಮನೆಯಿಂದ ತರಲ್ಪಟ್ಟ ಪದಾರ್ಥ ಅದು ರುಚಿಯಾಗಿರಲಿ ಅಥಾವಾ ಇಲ್ಲದಿದ್ದಾರೂ ಅದನ್ನೇ ಭಗವದರ್ಪಿತವಾದದ್ದು ಎಂಬ ಭಾವದಿಂದ ಸ್ವೀಕರಿಸುತ್ತಿದ್ದರಂತೆ.

ಆಲಸ್ಯವನ್ನು ಕಳೆಯಲು, ಗರುಡವಾಹನ ಎಂಬ ಮುದ್ರಿಕೆಯಿಂದ ನಾನಾ ಪ್ರಕಾರವಾದ ಪದ್ಯಗೀತೆಗಳಿಂದ ಭಗವಂತಂತನ ಚಿಂತನಾತ್ಮಕ ಕೃತಿಗಳನ್ನು ಮಾಡಿದರಂತೆ. ಅದನ್ನು ಪದ್ಮಾಸನದಲ್ಲಿಯೇ ಕುಳಿತು ಅವರ ಗೆಳತಿಯರಿಗೆಲ್ಲ ಹೇಳುತ್ತಿದ್ದರಂತೆ. ನಾನಾವರ್ಣದ ಬಟ್ಟೆಗಳಾವೂ ರುಚಿಸದೇ, ಪ್ರಾತಃ ಸಂಧ್ಯಾಕಾಲಕ್ಕೆ ಸಮಾನವಾದ ಬಣ್ಣದ ಬಟ್ಟೆಗಳು ಮಾತ್ರ ರುಚಿಸುತ್ತಿದ್ದವಂತೆ.

ತಿಮ್ಮಣ್ಣಾರ್ಯರು ತುಂಬಿ ಗರ್ಭವತೀ ಯಾದ ಗೋಪಿಕಾಂಬೆಗೆ ಷೊಡಷಕರ್ಮಗಳಲ್ಲಿ ಸೇರಿದ ಪುಂಸವನಸಂಸ್ಕಾರವನ್ನು ಮುಂದೆ ಹುಟ್ಟಲಿರುವ ಮಗು ಧರ್ಮವಂತನಾಗಿಯೇ ಆಗುತ್ತದೆ ಎಂಬಂತೆ ಅತ್ಯಂತ ಧರ್ಮಿಷ್ಠರಾಗಿ ನೆರವಿಸಿದರಂತೆ.

ಶ್ರೀಪ್ರಹ್ಲಾದರಾಜರ ಅವತಾರ:

ಅಸವಿಷ್ಟ ಸುತಂ ದ್ವಿಜೇಂದ್ರಪತ್ನೀ
ಶುಭಲಗ್ನೇಪರಿಪೂರ್ಣದೃಷ್ಫಿಭಾಜೀ |
ಅಖಿಲದ್ವಿಜರಾಜವಂದನೀಯಂ
ದ್ವಿಜರಾಜಂ ದಿಗಿವಾಮರಾಧಿಪಸ್ಯ ||

  • ಶ್ರೀರಾಘವೇಂದ್ರವಿಜಯ, ಸರ್ಗ 3 ಶ್ಲೋಕ 42

ದ್ವಿಜೇಂದ್ರಪತ್ನೀ – ಆ ದ್ವಿಜವರ್ಯರಾದ ಶ್ರೀತಿಮ್ಮಣ್ಣಾರ್ಯರ ಪತ್ನಿಯಾದ ಗೋಪಿಕಾಂಬೆಯು ಎಲ್ಲ ಶುಭಗ್ರಹಗಳ ಪರಿಪೂರ್ಣ ದೃಷ್ಟಿಯನ್ನು ಹೊಂದಿದ್ದ ಶುಭಲಗ್ನವೊಂದರಲ್ಲಿ ಎಲ್ಲ ಬ್ರಾಹ್ಮಣಶ್ರೇಷ್ಠರಿಂದಲೂ ನಮಸ್ಕೃತನಾಗಲು, ಸ್ತುತ್ಯನಾಗಲು ಯೋಗ್ಯನಾದ ಮಗನನ್ನು ಪೂರ್ವದಿಕ್ಕಿ ಚಂದ್ರನನ್ನು ಪ್ರಸವಿಸುವಂತೆ ಪ್ರಸವಿಸಿದಳು.

ಪುತ್ರೋತ್ಸವವಾದ ವಿಷಯ ಕೇಳಿ ಶ್ರೀತಿಮ್ಮಣ್ಣಾರ್ಯರು ಪರಮಸಂತುಷ್ಟರಾಗಿ ಬ್ರಾಹ್ಮಣೋತ್ತಮರಿಂದಲೂ ನಮಸ್ಕಾರ ಸ್ತುತಿಗಳನ್ನು ಹೊಂದಲು ಅರ್ಹವಾದ ಶಿಶುವಿನ ಪ್ರಾದುರ್ಭಾವ ಸಮಯದಲ್ಲಿ ಮಗನ ಜನ್ಮವೃತ್ತಾಂತಗಳ ಮಾತೆಂಬ ನೀರಿನಲ್ಲಿ ಸ್ನಾನಮಾಡಿ, ಪಿತೃಗಳ ಋಣವೆಂಬ ಕೆಸರಿನ ಸಮುದ್ರದಿಂದ ಮೇಲೆದ್ದರಂತೆ.

ಇದು ಇಂದಿನಿಂದ ಸರಿಯಾಗಿ 427 ಸಂವತ್ಸರಗಳ ಹಿಂದೆ ನಡೆದ ಘಟನಾವಳಿಗಳ ಸಾಲುಗಳಿವು. ಸಾಕ್ಷಾತ್ ಪ್ರಹ್ಲಾದರಾಜರೇ ನಮ್ಮೆಲ್ಲರ ಉದ್ಧಾರಕಾಗಿ ಧರೆಗಿಳಿದು ಬಂದ ಪ್ರಸಂಗವಿದು. ಅಂದಿನಿಂದ ಇಂದಿನ ವರೆಗೂ ಸಕಲವನ್ನೂ ತ್ಯಾಗ ಮಾಡಿ ಮಂತ್ರಾಲಯದಲ್ಲಿ ವಿರಾಜಮಾನರಾಗಿರುವ ಮುನಿವರ್ಯ ಶ್ರೀರಾಘವೇಂದ್ರತೀರ್ಥರು. ಕರುಣೆಯ ಸಾಗರ. “ತವ ಸಂಕೀರ್ತನಂ ವೇದ ಶಾಸ್ತ್ರಾರ್ಥ ಜ್ಞಾನಸಿದ್ಧಯೇ” ಎಂಬ ಅಪ್ಪಣಾಚಾರ್ಯರ ಮಾತಿನಂತೆ ತಮ್ಮ ಚರಿತ್ರೆಯನ್ನು ಚಿಂತಿಸುವವರಿಗೂ ಅನುಗ್ರಹಿಸುವ ಕರುಣಾಳು ಶ್ರೀರಾಘವೇಂದ್ರಗುರುರಾಜರು. ಆ ಮಹಾಪುಣ್ಯಕ್ಕೆ ನಮ್ಮೆಲ್ಲರನ್ನೂ ಭಾಗಿಗಳಾಗುವಂತ ಸೌಭಾಗ್ಯ ಕರುಣಿಸಿದವರು ಅದೇ ಗೌತಮವಂಶದ ರಕ್ತ ಹಂಚಿಕೊಂಡು ಹುಟ್ಟಿದ, ಕಾಶ್ಯಪಗೋತ್ರೋದ್ಭವರಾದ ಶ್ರೀನಾರಾಯಣಾಚಾರ್ಯರು. ಅವರಿಗೆ ದಂಡಪ್ರಣಾಮಗಳನ್ನು ಸಲ್ಲಿಸುತ್ತಾ.

ಶ್ರೀಕೃಷ್ಣಾರ್ಪಣಮಸ್ತು

  • ಸಮೀರ.ಜೋಶಿ

Leave a Reply

Your email address will not be published. Required fields are marked *