Rudra devara suladhi(Purandara dasaru)

ರುದ್ರದೇವರ ಸುಳಾದಿ – ಪುರಂದರದಾಸರು

ಧ್ರುವ ತಾಳ
ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ |
ಶಿವನೆ ಅಶ್ವತ್ಥಾಮ ಕಾಣಿರೊ |
ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ |
ಶಿವನಾದಿಯಲ್ಲಿ ಬೊಮ್ಮನ ಸುತ |
ಬೊಮ್ಮನಾದಿಯಲಿ ಅಚ್ಚ್ಯುತನ ಸುತ |
ಪುರಂದರವಿಠಲನೊಬ್ಬನೆ ಅಜಾತನಾಗಿಯೂ
ಜಾತನಾಗಿ ಇರುತಿಪ್ಪ ||1||

ಮಟ್ಟತಾಳ
ಹರಿಶಂಕರರೊಳಗೆ ಉತ್ತಮರಾರೆಂದು |
ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ |
ಸರಸಿಜ ಸಂಭವ ಸುರಪತಿಯಾದಿ ಸುರರು |
ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು |
ಹರಿ ಸಾರಂಗವನೆತ್ತಿದ ಏರಿಸಿದ ಶಂ-
ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ |
ಹರಿಯಾಡಿಸಲಾಡುವರಜ ಭವಾದಿಗಳು
ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ ||2||

ರೂಪಕತಾಳ
ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು |
ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ |
ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು |
ಸಿರಿ ಪುರಂದರ ವಿಠಲ ಶ್ರೀರಾಮ ಮುರಿದ ಬಿಲ್ಲು ||3||

ಅಟ್ಟತಾಳ
ಬಾಣಾಸುರನ ಭಕುತಿಗೊಲಿದು ಬಂದು |
ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು |
ಬಾಹು ಸಹಸ್ರವ ಕಡಿಯುವಾಗ |
ಬೇಕು ಬೇಡೊಂದೊಮ್ಮೆ ಎಂದನೆ ಶಿವನು |
ಪುರಂದರವಿಠಲ ಪರದೈವವೆಂದರಿತ ಕಾರಣ |
ಒಪ್ಪಿಸಿಯೇ ಕೊಟ್ಟಾ ಶಿವನು ||4||

ತ್ರಿವುಡೆತಾಳ
ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ ಉಪದೇಶಿಸುವ ಗೌರಿಗೆ |
ವಿಷ್ಣು ಸಹಸ್ರನಾಮಗಳ ಸಮ ರಾಮರಾಮೆಂದು ಭಕ್ತಿ ಭರದಲಿ |
ವಿಷ್ಣು ಪುರಂದರವಿಠಲ ರಾಯನ
ಅತ್ಯಧಿಕ ಪ್ರಿಯನು ಉಮೇಶನು ||5||

ಝಂಪೆತಾಳ
ರಾಮ ವಿಶ್ವರೂಪವ ಕಂಡು ಶಂಕರ |
ರಾಮನೇ ಪರದೈವ ರಾಮನೇ ಪರದೈವ |
ರಾಮನೆ ಎಂದು ಸ್ತುತಿಸಿದ ಕಾರಣ |
ರಾಮನೇ ಪರದೈವ ರಾಮಚಂದ್ರ ಸಿರಿ ಪುರಂದರವಿಠಲ ||6||

ಏಕತಾಳ
ಮಣಿಕರ್ಣಿಕೆ ತೀರಥದಲ್ಲಿ ಮುಮುಕ್ಷುಗಳಿಗೆ ಉಪದೇಶಿಸುವ |
ತಾರಕ ಬ್ರಹ್ಮ ಸ್ವರೂಪ ಆ ರಾಮನೆ ಕಾಣಿರೊ |
ರಾಮನಾಮ ಮಂತ್ರವ ಪುರಂದರ ವಿಠಲರಾಯಗೆ |
ಬಲ್ಲರಿಯ ಸದಾಶಿವ ||7||

ಜತೆ
ಜಗಕೆ ಶ್ರೀ ಅಜಭವಾದಿಗಳು ಗುರುಗಳು |
ಜಗಕೆ ಶ್ರೀ ಪುರಂದರ ವಿಠಲನೆ ದೈವ ||

Leave a Reply

Your email address will not be published. Required fields are marked *